ಇಂದು ಜೆಡಿಎಸ್ ಅಧ್ಯಕ್ಷ ಸಿ ಎಂ ಇಬ್ರಾಹಿಂ ನೇತೃತ್ವದಲ್ಲಿ ಚಿಂತನ ಮಂಥನ ಸಭೆ – ಸಭೆ ಬಳಿಕ ಸಿ ಎಂ ಐ ಜೆಡಿಎಸ್ ಗೆ ರಾಜೀನಾಮೆ ಘೋಷಣೆ ಸಾಧ್ಯತೆ

ಮಂಗಳೂರು: ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ ಎಮ್ ಇಬ್ರಾಹಿಂ ಇಂದು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಮುನಿಸಿಕೊಂಡಿರುವ ಇಬ್ರಾಹಿಂ, ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಪ್ತ ಮೂಲಗಳು ತಿಳಿಸಿವೆ.

ಸಿ ಎಮ್ ಇಬ್ರಾಹಿಂ ಇಂದು ಬೆಂಗಳೂರಿನಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಕುರಿತಂತೆ ಚಿಂತನ ಮಂಥನ ಸಭೆ ಕರೆದಿದ್ದು, ಎಲ್ಲಾ ವರ್ಗದ ಜನರನ್ನು ಸಭೆಗೆ ಆಹ್ವಾನಿಸಿದ್ದಾರೆ. ಯಾರ ವಿಶ್ವಾಸವನ್ನೂ ಪಡೆಯದೇ, ಚರ್ಚಿಸದೆ ಏಕಾಏಕಿ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಖುದ್ದು ದೇವೇಗೌಡರು ಕರೆ ಮಾಡಿದ್ದರೂ ಇಬ್ರಾಹಿಂ, ಯಾರ ಕೈಗೂ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ನೆಚ್ಚಿ ರಾಜಕಾರಣ ಮಾಡಲ್ಲ ಎಂದು ಹೇಳಿದ್ದರು. ಇದು ಇಬ್ರಾಹಿಂ ಅವರನ್ನು ಮತ್ತಷ್ಟು ಕೆರಳುವಂತೆ ಮಾಡಿತ್ತು ಎನ್ನಲಾಗಿದೆ. ಯಾವಾಗ ಇಬ್ರಾಹಿಂ, ದಳಪತಿಗಳಿಂದ ಅಂತರ ಕಾಯ್ದುಕೋಂಡರೋ, ಒಬ್ಬೊಬ್ಬರಾಗಿ ಅಲ್ಪಸಂಖ್ಯಾತ ನಾಯಕರು ಪಕ್ಷ ತ್ಯಜಿಸಲು ಮುಂದಾದರು. ಇಬ್ರಾಹಿಂ ರನ್ನು ನಾವೇನು ಪಕ್ಷಕ್ಕೆ ಕರೆದಿರಲಿಲ್ಲ, ಅವರು ತಾವಾಗಿಯೇ ಪಕ್ಷಕ್ಕೆ ಬಂದಿದ್ದು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಅದೇನಿದ್ದರೂ ಇಂದಿನ ಚಿಂತನ ಮಂಥನ  ಸಭೆಯ ಬಳಿಕ ಸಿ ಎಂ ಇಬ್ರಾಹಿಂ ಅವರ ನಿಲುವು ಸ್ಪಷ್ಟವಾಗಲಿದೆ.

LEAVE A REPLY

Please enter your comment!
Please enter your name here