ಮಂಗಳೂರು: ಪುದು ಗ್ರಾಮದ ಕೋಡಿಮಜಲು ನಿವಾಸಿ ಬಿಲ್ಡರ್ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನೊಳಗೆ ಇರಿಸಲಾಗಿದ್ದ ಚಿನ್ನಾಭರಣ ಸಹಿತ ಹಣ ಕಳವಾಗಿರುವ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಸುಮಾರು 27,50,000 ಲಕ್ಷ ರೂ ನಗದು ಮತ್ತು 4,96,000 ಲಕ್ಷ ರೂ ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನ್ನ ಜೊತೆ ಸುಮಾರು ಏಳೆಂಟು ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿ ಆಲಿ ಎಂಬಾತ ಕೆಲಸ ಮಾಡಿಕೊಂಡಿದ್ದು, ವಿಶ್ವಾಸ ಗಳಿಸಿದ್ದ.
ಅ.18ರಂದು ತನ್ನ ತಂದೆ, ತಾಯಿ, ಅಕ್ಕ ಮತ್ತು ತಂಗಿಯವರು ತಮ್ಮನ ಮನೆಗೆ ಹೋಗುವ ಸಂದರ್ಭ ಮನೆಗೆ ಬೀಗ ಹಾಕಿ ಮನೆಯ ಕೀಯನ್ನು ಆಲಿ ಕೈಗೆ ನೀಡಿದ್ದಾರೆ. ಅ.23ರಂದು ರಾತ್ರಿ ಮನೆಯವರು ಮನೆಗೆ ಹಿಂತಿರುಗಿ, ಮನೆಯ ಕೀಯನ್ನು ಪಡೆಯಲು ಆಲಿಗೆ ಕರೆಮಾಡಿದಾಗ ಆತನ ಫೊನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮನೆ ಹೊರಗಡೆಯಿಂದ ಕಿಟಕಿ ಮೂಲಕ ನೋಡಿದಾಗ ಬೆಡ್ ರೂಮಿನಲ್ಲಿರುವ ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿ , ಪೋಲೀಸ್ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಬಂದು ಮನೆಯನ್ನು ಪರಿಶೀಲಿಸಿದಾಗ ನಗದು ರೂಪಾಯಿ 27,50,000, ಅಂದಾಜು ರೂ 4,96,000 ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಅ.18 ರಂದು ಮನೆ ಮಂದಿ ಎಲ್ಲರು ಮನೆಗೆ ಬೀಗ ಹಾಕಿ ಮಂಗಳಾದೇವಿ, ಜಪ್ಪುನಲ್ಲಿರುವ ತಮ್ಮನ ಮನೆಗೆ ಹೋಗಿದ್ದರು. ಮನೆಗೆ ಬೀಗ ಹಾಕಿ ಅದರ ಕೀ ಯನ್ನು ಆಲಿ ಬಳಿ ನೀಡಿದ್ದರು. ಆ ಬಳಿಕ 19 ರಂದು ಕಟ್ಟಡ ಕಾಮಗಾರಿ ವಿಚಾರಕ್ಕೆ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಆದರೆ ಪೋನ್ ಸ್ವಿಚ್ ಆಫ್ ಆಗಿರುವ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಂಡಿರದ ಮಹಮ್ಮದ್ ಮರುದಿನ ಅ.20ರಂದು ಅಗತ್ಯ ಕೆಲಸವೊಂದರ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿಂದ ಪೋನ್ ಮಾಡಿದಾಗಲೂ ಈತನ ಮೊಬೈಲ್ ಆಫ್ ಆಗಿತ್ತು. ಕೆಲಸದ ಒತ್ತಡದ ನಡುವೆ ಅ. 23 ರಂದು ಊರಿಗೆ ವಾಪಾಸು ಆದ ಮಹಮ್ಮದ್ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಹಾಕಿಕೊಂಡಿತ್ತು. ಕೀ ಕೊಡುವಂತೆ ಆತನಿಗೆ ಪೋನ್ ಮಾಡಿದಾಗ ಆಗಲೂ ಆಫ್ ಆಗಿತ್ತು. ಸಂಶಯದಿಂದ ಮನೆಯ ಹಿಂಬದಿಯಿಂದ ಕಿಟಕಿಯಲ್ಲಿ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿದ್ದು, ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತ್ತು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.