ಮಂಗಳೂರು(ಉಡುಪಿ): ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳವೀಕ್ಷಕರ ಸಂಘವು ಅ.28ರ ಪಾರ್ಶ್ವ ಚಂದ್ರಗ್ರಹಣವನ್ನು ಉಡುಪಿ ಮತ್ತು ಮಂಗಳೂರಿನಿಂದ ಸೆರೆಹಿಡಿದಿದೆ.
ಅ.28ರಂದು ರಾತ್ರಿ 11:31ಕ್ಕೆ ಈ ಗ್ರಹಣವು ಅರೆನೆರಳಿನ ಹಂತದಿಂದ ಪ್ರಾರಂಭಗೊಂಡಿತು. ಹಾಗೆಯೇ ಅ.29ರ ನಸುಕಿನ ವೇಳೆ ಒಂದು ಗಂಟೆಯಿಂದ ಚಂದ್ರನ ಮೇಲೆ ಭೂಮಿಯ ನೆರಳು ಕಾಣಲು ಪ್ರಾರಂಭವಾಯಿತು. 1:44ಕ್ಕೆ ಗ್ರಹಣ ಗರಿಷ್ಠ ಹಂತವನ್ನು ತಲುಪಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಚಂದ್ರನು ಮೋಡಗಳಿಂದ ಆವೃತವಾಗಿದ್ದು, ಉಡುಪಿ ಮತ್ತು ಮಂಗಳೂರಿನ ಹಲವು ಪ್ರದೇಶಗಳಲ್ಲಿ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಸಂಘದ ಸಂಯೋಜಕ ಡಾ. ಅತುಲ್ ಭಟ್ ತಿಳಿಸಿದ್ದಾರೆ. ಇದು ಈ ವರ್ಷದ ಅಂತಿಮ ಗ್ರಹಣವಾಗಿದ್ದು, 2024ರಲ್ಲಿ ಯಾವುದೇ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಮತ್ತೊಮ್ಮೆ ಗ್ರಹಣ ನೋಡಲು ಸಾಧ್ಯವಾಗುವುದು ಸೆಪ್ಟಂಬರ್ 2025ರಲ್ಲಿ ಮಾತ್ರ.