ರಸ್ತೆ ತಡೆ ತೆರವುಗೊಳಿಸಲು ಬಂದ ಪೊಲೀಸ್‌ ಅಧಿಕಾರಿಗೆ ಉದ್ರಿಕ್ತ ಜನರಿಂದ ಹಲ್ಲೆ – ವಿಡಿಯೋ ವೈರಲ್‌

ಮಂಗಳೂರು (ಲಕ್ನೊ): ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 13‌  ವರ್ಷದ ಬಾಲಕನೋರ್ವ ಮೃತಪಟ್ಟಿದ್ದು, ಉದ್ರಿಕ್ತ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಈ ಸಂದರ್ಭ ರಸ್ತೆ ತಡೆ ತೆರವುಗೊಳಿಸಲು ಆಗಮಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಮ್ ಅವತಾರ್ ಹಾಗೂ ಅವರ ತಂಡದ ಮೇಲೆ ದೊಣ್ಣೆ ಹಿಡಿದುಕೊಂಡ ಜನರ ಗುಂಪೊಂದು ದಾಳಿ ನಡೆಸಿದೆ. ದಾಳಿಯ ವಿಡಿಯೋ ವೈರಲಾಗಿದೆ.

ಈ ಸಂದರ್ಭ ಪೊಲೀಸ್ ತಂಡದಲ್ಲಿದ್ದ ಮೂವರು ಸದಸ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ. ರಾಮ್ ಅವತಾರ್ ಮಾತ್ರ ಉದ್ರಿಕ್ತ ಜನರನ್ನು ಏಕಾಂಗಿಯಾಗಿ ಎದುರಿಸಿದ್ದಾರೆ. ವಿಷಯ ಅರಿತ ಕೂಡಲೇ ಉಪ ವಿಭಾಗೀಯ ದಂಡಾಧಿಕಾರಿ ಹಾಗೂ ಪೊಲೀಸ್ ಉಪ ಅಧೀಕ್ಷರು ಸ್ಥಳಕ್ಕೆ ಧಾವಿಸಿ ಜನರನ್ನು ಸಮಾಧಾನಪಡಿಸಿದ್ದಾರೆ. ಗಾಯಗೊಂಡಿದ್ದ ರಾಮ್ ಅವತಾರ್ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ದಾಳಿಯಲ್ಲಿ ಭಾಗಿಯಾದ ಐವರು ಸ್ಥಳೀಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಇಬ್ಬರು ಪೊಲೀಸ್ ಠಾಣೆಗೆ ಕರೆದೊಯ್ಯುವ ಸಂದರ್ಭ ಪೊಲೀಸರ ರಿವಾಲ್ವರ್ ಕಸಿದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಕಾನ್ಸ್‌ಟೆಬಲ್ ಹಾಗೂ ಓರ್ವ ಸಬ್ ಇನ್ಸ್‌ಪೆಕ್ಟರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

 ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here