ರಜೆಯಲ್ಲಿ ಊರಿಗೆ ಬಂದಾಗ ಬಸ್‌ ಡ್ರೈವರ್‌ ಆಗುವ ಪೈಲಟ್‌ ಶ್ರೀಹರಿ

ಮಂಗಳೂರು: ವೃತ್ತಿಯಲ್ಲಿ ವಿಮಾನದ ಪೈಲೆಟ್. ರಜೆಯಲ್ಲಿ ಊರಿಗೆ ಬಂದಾಗ ಬಸ್ ಡ್ರೈವರ್. ಇಂತಹ ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿದೆಯಾ? ಇಲ್ಲ ಅಂದ್ರೆ ಈ ಲೇಖನವನ್ನು ಓದಿ.


ಶ್ರೀ ಹರಿ ಕಾಸರಗೋಡು ಜಿಲ್ಲೆಯ ಕಾಞಂಗಾಡಿನವರು. ತಂದೆ ವರದಾಯಿನಿ ಬಸ್ ಸರ್ವಿಸ್ ಎಂಬ ಸಂಸ್ಥೆಯ ಮಾಲೀಕರಾಗಿದ್ದರೆ ತಾಯಿ ಸರಕಾರಿ ಶಾಲೆಯಲ್ಲಿ ಟೀಚರ್.
ಶ್ರೀಹರಿಗೆ ಚಿಕ್ಕಂದಿನಿಂದಲೇ ವಾಹನಗಳ ಮೇಲೆ ಅತಿಯಾದ ಪ್ರೀತಿ. ತಂದೆಯ ಬಸ್ಸುಗಳೇನಾದರೂ ಮನೆಯ ಮುಂದೆ ಬಂದು ನಿಂತಿದ್ದರೆ ಹರಿ ನೇರವಾಗಿ ಹೋಗಿ ಕುಳಿತುಕೊಳ್ಳುತ್ತಿದ್ದದ್ದು ಡ್ರೈವರ್ ಸೀಟ್ ಮೇಲೆ. ನಾಲ್ಕನೇ ಕ್ಲಾಸಿನಿಂದಲೇ ತಂದೆ ಜೊತೆ ಕಾರಿನ ಸ್ಟೇರಿಂಗ್ ತಿರುಗಿಸಲು ಆರಂಭಿಸಿದ ಹರಿ 7ನೇ ಕ್ಲಾಸಿನಲ್ಲಿರುವ ವೇಳೆ ಡ್ರೈವಿಂಗ್ ಕಲಿತಿರುತ್ತಾನೆ. ಹತ್ತನೇ ಕ್ಲಾಸ್ ಪಾಸ್ ಆಗುವ ಹೊತ್ತಿಗೆ ಒಬ್ಬ ಸಂಪೂರ್ಣ ಚಾಲಕನಾಗಿರುತ್ತಾನೆ. ಆಗ ಹರಿ ಕನಸು ಕಾಣುತ್ತಿದ್ದದ್ದು ಆಕಾಶದಲ್ಲಿ ಹಾರುವ ಲೋಹದ ಹಕ್ಕಿಗಳ ಕುರಿತು. ಅಂದರೆ ವಿಮಾನ ಹಾರಿಸುವ ಬಗ್ಗೆ. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಯುತ್ತದೆ. ಪೈಲೆಟ್ ಟ್ರೈನಿಂಗ್ ಎಲ್ಲಿ ಎಂದು ಹುಡುಕುತ್ತಿರುವಾಗ ನೆರವಿಗೆ ಬರುವವರು ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಊರಿನವರೇ ಆದ ಮನೋಜ್ ಕುಮಾರ್. ಅವರ ಮಾರ್ಗದರ್ಶನದ ಮೇರೆಗೆ ಹರಿ ಹೋಗಿ ಸೇರಿದ್ದು ಉತ್ತರ ಪ್ರದೇಶದ ರಾಯ್ ಬರೇಲಿ ಯಲ್ಲಿರುವ ಇಂದಿರಾ ಗಾಂಧಿ ಉಡಾನ್ ಅಕಾಡೆಮಿಯಲ್ಲಿ.
ಅಲ್ಲಿಂದ ಪೈಲೆಟ್ ಟ್ರೈನಿಂಗ್ ಪೂರ್ತಿಗೊಳಿಸಿ ಗ್ರೌಂಡ್ ಪರೀಕ್ಷೆಗಳನ್ನು ಮುಗಿಸಿ (CPL) ವಾಣಿಜ್ಯ ವಿಮಾನ ಚಾಲನಾ ಲೈಸನ್ಸ್ ಪಡೆಯುವ ಹೊತ್ತಿಗೆ ಮಹಾಮಾರಿ ಕೊರೋನ ಬಂದು ಅಪ್ಪಳಿಸಿತ್ತು. ಹಾಗೆ ಎರಡು ವರ್ಷ ಕೆಲಸ ಸಿಗದ ಶ್ರೀಹರಿಗೆ ಮೊದಲು ಕೆಲಸ ಕೊಟ್ಟದ್ದು ಟಾಟಾ ಒಡೆತನದ ಏರ್ ಏಷ್ಯಾ ವಿಮಾನಯಾನ ಸಂಸ್ಥೆ. ಬೆಂಗಳೂರು, ಮುಂಬೈ, ದೆಹಲಿ, ಕೊಚ್ಚಿ, ಅಂತ ದೇಶದೊಳಗೆ ಹಾರುತ್ತಿದ್ದ ಇವರ ಕಠಿಣ ಪರಿಶ್ರಮ ಮತ್ತು ಚುರುಕುತನ ಕಂಡು ಟಾಟಾ ಸಂಸ್ಥೆಗೆ  ಸೇರಿದ ಏರ್ ವಿಸ್ತಾರ ಕೈಬೀಸಿ ಕರೆಯುತ್ತದೆ.
ವಿಸ್ತಾರ ಸೇರಿದ ಬಳಿಕ ಕಾಕ್ ಪಿಟ್ ನಲ್ಲಿ ಕೋ ಪೈಲೆಟ್ ಆಗಿ ಕುಳಿತಿರುತ್ತಿದ್ದ ಹರಿ ವಿದೇಶಗಳಿಗೆ ಹಾರಲು ಶುರು ಮಾಡುತ್ತಾರೆ. ಮೊದಲ ವಿದೇಶ ಹಾರಾಟ ನಡೆಸಿದ್ದು ಮುಂಬೈಯಿಂದ ಹಜ್ ಪ್ರಯಾಣಿಕರನ್ನು ಕರೆದುಕೊಂಡು ಸೌದಿ ಅರೇಬಿಯಾಗೆ. ಬೈಕು, ಆಟೋ, ಕಾರು, ಬಸ್ಸು, ಮತ್ತು ವಿಮಾನಗಳನ್ನು ಓಡಿಸಲು ಲೈಸೆನ್ಸ್ ಹೊಂದಿರುವ ಹರಿ ರಜೆಯಲ್ಲಿ ಊರಿಗೆ ಬಂದಾಗ ಬಿಳಿ ಮುಂಡು ಉಟ್ಟುಕೊಂಡು ತಂದೆಯ ವರದಾಯಿನಿ ಬಸ್ಸಿನ ಡ್ರೈವರ್ ಸೀಟಿನಲ್ಲಿ ಕುಳಿತು ಕಾಣುತ್ತಾರೆ.
ಈಗ 3000 ಗಂಟೆಗಳ ಹಾರಾಟವನ್ನು ಮುಗಿಸಿ ನಾಲ್ಕು ಪಟ್ಟಿಗಳನ್ನು ಭುಜಗಳಿಗೆ ಏರಿಸಿಕೊಂಡು ವಿಸ್ತಾರದಲ್ಲಿ ಫ್ಲೈಟ್ ಕ್ಯಾಪ್ಟನ್ ಆಗಿರುವ ಶ್ರೀಹರಿ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಹಾರಾಟ ನಡೆಸುತ್ತಿದ್ದಾರೆ. ಶುಭವಾಗಲಿ ಎನ್ನೋಣಾ ಅಲ್ಲವೇ?

ಲೇಖನ: ಇಕ್ಬಾಲ್‌ ಸಂಪೋಲಿ

LEAVE A REPLY

Please enter your comment!
Please enter your name here