ಮಂಗಳೂರು(ಹೊಸಪೇಟೆ): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು 6 ತಿಂಗಳಾಗುತ್ತಿದ್ದಂತೆ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಶಾಸಕರು, ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಬಣ ರಾಜಕೀಯದ ಸದ್ದು ಜೋರಾಗಿ ಕೇಳಿ ಬಂರುತ್ತಿದೆ. ಸಿಎಂ ಸಿದ್ದರಾಮಯ್ಯ ಎರಡೂವರೆ ವರ್ಷಗಳವರೆಗೆ ಮಾತ್ರ ಸಿಎಂ, ನಂತರ ಡಿಕೆಶಿ ಸಿಎಂ ಆಗುತ್ತಾರೆ ಎಂದು ಸುದ್ದಿ ಹರಿದಾಡಿತ್ತಿದ್ದು, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡವರು ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗುತ್ತಾರೆ ಅನ್ನುವ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಜನತೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುವುದನ್ನು ಅರಿತ ಹೈಕಮಾಂಡ್ ನಾಯಕರು ರಾತ್ರೋರಾತ್ರಿ ಭೇಟಿ ನೀಡಿ ಅನಾವಶ್ಯಕ ಹೇಳಿಕೆ ನೀಡದಂತೆ ಕಟ್ಟಪ್ಪಣೆ ಮಾಡಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ “ನಾನೇ ಸಿಎಂ ಆಗಿ ಮುಂದುವರೆಯುವೆ” ಎಂದು ಹೇಳಿಕೆ ನೀಡಿದ್ದು ಹೊಸ ಚರ್ಚೆಗೆ ಕಾರಣವಾಗಿದೆ.
ವಿಜಯನಗರ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನ.2ರಂದು ಹೊಸಪೇಟೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ‘ಐದು ವರ್ಷ ನೀವೇನಾ ಸಿಎಂ?’ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ‘ನಾನೇ ಮುಂದುವರೆಯುವೆ’ ಎಂದಷ್ಟೇ ಹೇಳಿದ್ದಾರೆ. ‘ಐದು ವರ್ಷ ನಮ್ಮದೆ ಸರ್ಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿ. ನಾನೇ ಮುಂದುವರಿಯುವೆ’ ಎಂದು ಹೇಳಿದ್ದಾರೆ. ಡಿಸಿಎಂ ವಿಚಾರ ತಿರ್ಮಾನ ಮಾಡುವುದು ಹೈಕಮಾಂಡ್‌ಗೆ ಬಿಟ್ಟದ್ದು. ನಮ್ಮದು ರಾಷ್ಟ್ರೀಯ ಪಕ್ಷ. ಏನೇ ತೀರ್ಮಾನವಾದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ತೆಗೆದುಕೊಳ್ಳುವುದು ಎಂದು ಹೇಳಿದ ಸಿಎಂ ಬಿಜೆಪಿಗರು ಭ್ರಮನಿರಶನಗೊಂಡಿದ್ದಾರೆ. ಅವರಿಗೆ ಅಧಿಕಾರ ಇಲ್ಲದೆ ಇರಲು ಆಗುವುದಿಲ್ಲ. ಮತ್ತೆ ಅಪರೇಷನ್ ಮಾಡಲು ಪ್ರಯತ್ನ ಮಾಡ್ತಾರೆ. ಅದು ಸಾಧ್ಯವಾಗಲ್ಲ ಎಂದು ಹೇಳಿದರು.