ಮಂಗಳೂರು: ಕಳೆದ ಅ.26 ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಬರಡ್ಕದ ಐಶ್ವರ್ಯ ಪ್ರಕರಣಕ್ಕೆ ಸಂಬಂಧಿಸಿ ಮಾವ ಗಿರಿಯಪ್ಪ ಗೌಡ ಕಾಪಿಲ, ಪತಿ ರಾಜೇಶ್ ಸೇರಿದಂತೆ ಐವರನ್ನು ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಸುಳ್ಯದ ಉಬರಡ್ಕ ಮಿತ್ತೂರಿನವರಾದ ಎಂ.ಎಸ್.ಸುಬ್ರಹ್ಮಣ್ಯ ಮದುವೆಗದ್ದೆ ಹಾಗೂ ಉಷಾ ದಂಪತಿಯ ಪುತ್ರಿ ಐಶ್ವರ್ಯ ಅವರನ್ನು 5 ವರ್ಷದ ಹಿಂದೆ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕಾಪಿಲ ಗಿರಿಯಪ್ಪ ಗೌಡರ ಪುತ್ರ ರಾಜೇಶ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ ಮಕ್ಕಳಾಗಿರಲಿಲ್ಲ. ಇತ್ತೀಚಿನ ಕೆಲವು ತಿಂಗಳುಗಳಿಂದ ಪತಿ ಮನೆಯವರಿಗೂ, ಇವರಿಗೂ ಭಿನ್ನಾಭಿಪ್ರಾಯ ಆರಂಭವಾಗಿ ಐಶ್ವರ್ಯರಿಗೆ ಮಾನಸಿಕ ಕಿರುಕುಳವಾಗುತ್ತಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅ.3 ರಂದು ಗಂಡನ ಮನೆಯಿಂದ ಬೆಂಗಳೂರಿನಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದರು. ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು ಅ.26 ರಂದು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಡೆತ್ ನೋಟ್‌ನ ಆಧಾರದಲ್ಲಿ ಹಾಗೂ ತಾಯಿ ಉಷಾರವರು ನೀಡಿದ ದೂರಿನ ಆಧಾರದಲ್ಲಿ ಗೋವಿಂದರಾಜನಗರ ಪೊಲೀಸರು ಐಶ್ವರ್ಯ ಪತಿ ರಾಜೇಶ, ಮಾವ ಗಿರಿಯಪ್ಪ ಗೌಡ ಕಾಪಿಲ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಯ್ ಅಲ್ಲದೆ ತಂದೆಯ ಅಕ್ಕ ಗೀತಾ, ಅವರ ಪತಿ ರವೀಂದ್ರನಾಥ, ಲಿಪಿ, ತಂದೆಯ ತಮ್ಮ ಓಂಪ್ರಕಾಶ್, ಅವರ ಪತ್ನಿ ಶಾಲಿನಿ ಅವರ ವಿರುದ್ದ ಕೇಸು ದಾಖಲಾಗಿದೆ.
ಆರೋಪಿಗಳ ಪೈಕಿ ಪತಿ ರಾಜೇಶ, ಮಾವ ಗಿರಿಯಪ್ಪ ಗೌಡ, ಅತ್ತೆ ಸೀತಾ, ಮೈದುನ ವಿಜಯ್ ಮತ್ತು ಓರಗಿತ್ತಿ ತಸ್ಮಯ್ ಅವರನ್ನು ನಿನ್ನೆ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.