ದೇವರ ಹೆಸರಿನಲ್ಲಿ ಮೋಸ-ಪೂಜೆ ಮಾಡಿಸುವುದಾಗಿ 30 ಲಕ್ಷ ರೂಪಾಯಿ ದೋಖಾ

ಮಂಗಳೂರು(ಕೊಲ್ಲೂರು): ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಎಂಬುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ದಿಲ್ನಾ(45) ವಂಚನೆಗೆ ಒಳಗಾದವರು. ಕಳೆದ ವರ್ಷ ತನ್ನ ಕುಟುಂಬದೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದು, ಅಲ್ಲಿ ಸುಧೀರ್ ಕುಮಾರ್ ಎಂಬಾತನ ಪರಿಚಯವಾಗಿತ್ತು. ಈತ ತಾನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಎಂಬುದಾಗಿ ದಿಲ್ನಾ ಅವರನ್ನು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಹಾಕುವಂತೆ ಕೇಳಿದ್ದ. ವಿದೇಶದಲ್ಲಿರುವ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್ ಅವರಿಂದ ಹಲವು ಬಾರಿ ಸುಧೀರ್ ಕುಮಾರ್ ತನ್ನ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದ. ಅಲ್ಲದೇ ದಿಲ್ನಾ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸಿಕೊಡುವುದಾಗಿ ಹೇಳಿ ಖಾತೆಗೆ ಹಣ ಹಾಕಿಸಿಕೊಂಡಿದ್ದ.

ದಿಲ್ನಾ ತಾಯಿ ಬಳಿ ಜಾಗದ ಖಾತೆ ಬದಲಾವಣೆ ಬಗ್ಗೆ ಕೆಲವು ಸಹಿಯನ್ನೂ ಹಾಕಿಸಿಕೊಂಡಿದ್ದ. ಆದರೆ ಸುಧೀರ್  ಹಣವನ್ನು ಪಡೆದು ದೇವಸ್ಥಾನದಲ್ಲಿ ಯಾವುದೇ ಪೂಜೆ ಮಾಡಿಸದೆ, ಜಾಗದ ಖಾತೆ ಬದಲಾವಣೆಯನ್ನು ಮಾಡಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ದಿಲ್ನಾ ದೇವಸ್ಥಾನಕ್ಕೆ ಬಂದು ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ಸುಧೀರ್ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನೂ ಆಗಿರದೇ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ವ್ಯಕ್ತಿ ಎಂಬುದಾಗಿ ತಿಳಿದುಬಂತು. ಈತ ದಿಲ್ನಾ ಮತ್ತು ಅವರ ಅಣ್ಣನಿಂದ ಒಟ್ಟು 30,73,600ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ದಿಲ್ನಾ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here