ಮಂಗಳೂರು(ಲಂಡನ್): ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ತಮ್ಮ ಮಗನಿಗೆ ಹೆಸರಾಂತ ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್ ಚಂದ್ರಶೇಖರ್ ಅವರ ಹೆಸರನ್ನು ಇಟ್ಟಿದ್ದನ್ನು ಬಹಿರಂಗಪಡಿಸಿದ್ದಾರೆ.
ಬ್ರಿಟನಿನಲ್ಲಿ ನಡೆದ ಗ್ಲೋಬಲ್ ಎಐ ಶೃಂಗಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ವಿಷಯ ಬಹಿರಂಗವಾಗಿದೆ. ಮಸ್ಕ್ ಚಂದ್ರಶೇಖರ್ ಅವರ ಹೆಸರು ಕೇಳಿದಾಗ ತಮ್ಮ ಪುತ್ರನ ಹೆಸರಲ್ಲೂ ಚಂದ್ರಶೇಖರ್ ಇರುವುದಾಗಿ ತಿಳಿಸಿದ್ದಾರೆ. ಮಸ್ಕ್ ಅವರೊಂದಿಗಿನ ಭೇಟಿಯ ಫೋಟೋವನ್ನು ಎಕ್ಸ್ ನಲ್ಲಿ ರಾಜೀವ್ ಚಂದ್ರಶೇಖರ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಬರೆದಿರುವ ಅವರು, ಎಲಾನ್ ಮಸ್ಕ್ ಮತ್ತು ಶಿವೋನ್ ಜಿಲಿಸ್ ಅವರ ಪುತ್ರನಿಗೆ ‘ಚಂದ್ರಶೇಖರ್’ ಎಂಬ ಮಧ್ಯದ ಹೆಸರನ್ನು ಇಟ್ಟಿರುವುದನ್ನು ಹಂಚಿಕೊಂಡಿದ್ದಾರೆ. ಈ ವಿಶಿಷ್ಟ ಹೆಸರು 1983 ರಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹೆಸರಾಂತ ನೊಬೆಲ್ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್ ಚಂದ್ರಶೇಖರ್ ಅವರಿಗೆ ಗೌರವವಾಗಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಕೆನಡಾದ ಶಿವನ್ ಆಲಿಸ್ ಜಿಲಿಸ್ ಈ ಮಗುವಿನ ತಾಯಿಯಾಗಿದ್ದು, ಈ ವಿಷಯವನ್ನು ಖಚಿತಪಡಿಸಿದ್ದಾರೆ.