ಮಂಗಳೂರು(ಬೆಂಗಳೂರು): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಳೆ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ನ 19 ಶಾಸಕರ ಬೆಂಬಲ ಇದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
ನ.4ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಸುಮ್ಮನೇ ಕರೆ ಮಾಡಿ ಪಕ್ಷಕ್ಕೆ ಬನ್ನಿ, ಮಂತ್ರಿ ಮಾಡುತ್ತೇವೆ ಎಂದೆಲ್ಲಾ ಹೇಳುವುದರ ಬದಲಾಗಿ ಒಂದು ಕೆಲಸ ಮಾಡೋಣ.. ಡಿ.ಕೆ. ಶಿವಕುಮಾರ್ ನಾಳೆ ಬೆಳಗ್ಗೆ ಸಿಎಂ ಆಗೋದಾದ್ರೆ ನಮ್ಮ 19 ಜೆಡಿಎಸ್ ಶಾಸಕರ ಬೆಂಬಲವನ್ನೂ ನೀಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳುತ್ತಾ ಜೋರಾಗಿ ನಕ್ಕಿದ್ದಾರೆ. ಕಾಂಗ್ರೆಸ್ ನಲ್ಲಿ ಸದ್ಯದ ಪರಿಸ್ಥಿತಿ ನೋಡಿದರೆ ಎಷ್ಟು ಜನ ಸಿಎಂ ಆಗುತ್ತಾರೆ ಗೊತ್ತಿಲ್ಲ. ಇದನ್ನು ನೋಡಿದರೆ ಈ ಸರಕಾರಕ್ಕೆ ಒಂದು ಹೆಸರು ಇಡಬಹುದು. ಟಿಸಿಎಂ, ಡಿಸಿಎಂ ಸರಕಾರ ಎಂದು ಕರೆಯಬಹುದು. ಟಿಸಿಎಂ ಅಂದರೆ ಟೆಂಪರರಿ ಸಿಎಂ, ಡಿಸಿಎಂ ಅಂದ್ರೆ ಡೂಪ್ಲಿಕೇಟ್ ಸಿಎಂ ಎಂದು ಅವರು ವ್ಯಂಗ್ಯವಾಡಿದ್ದಾರೆ.