ಮಂಗಳೂರು: ನಗರದ ಬಿಜೈ ಚರ್ಚ್ ಮೈನ್ ರೋಡ್ ಬಳಿ ಅ.21ರ ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಚಂದ್ರಶೇಖರ ಯಾನೆ ಡಾರ್ಲಿಂಗ್ ಚಂದ್ರ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಗ್ರ ಕೂಳೂರು ಬಳಿ ನ.4ರಂದು ಬಂಧಿಸಿದ್ದಾರೆ.
ಅ.21ರಂದು ಮುಂಜಾನೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದಾಗ ಇಬ್ಬರು ಅಪರಿಚಿತ ಯುವಕರು ಬೈಕ್‌ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಂಗಳೂರು ಸಿಸಿಬಿ ಘಟಕದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ರಾಮನಗರ ಜಿಲ್ಲೆಯ ಆರೋಪಿ ಚಂದ್ರಶೇಖರನನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಸುಲಿಗೆ ಮಾಡಿದ್ದ 21.300 ಗ್ರಾಂ ತೂಕದ ತುಂಡಾದ ಚಿನ್ನದ ಕರಿಮಣಿ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್ ಫೋನ್ ವಶಪಡಿಸಲಾಗಿದೆ. ಇವುಗಳ ಮೊತ್ತ 2,41,000 ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.