ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ವಿಡಿಯೋ – ಸೂಕ್ತ ಕ್ರಮಕ್ಕೆ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಆಗ್ರಹ

ಮಂಗಳೂರು(ಮುಂಬಯಿ): ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಮನೆಮಾತಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೋಗೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿರುವ ಭಾರತೀಯ ಚಿತ್ರರಂಗದ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಈ ವಿಷಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ರಕ್ಷಿತ್‌ ಶೆಟ್ಟಿಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ಮಂದಣ್ಣ ಪರಭಾಷಾ  ಚಿತ್ರಗಳಲ್ಲಿ ಅವಕಾಶ ದೊರೆಯುತ್ತಿದ್ದಂತೆ ನಿಶ್ಚಿತಾರ್ಥ ಕಡಿದುಕೊಂಡಿದ್ದಾರೆಂದು ಆರೋಪಿಸಿ ಕೆಲವೊಂದು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಅವರನ್ನು ಗುರಿಯಾಗಿಸಿಕೊಂಡು ವರದಿಗಳು ಪ್ರಕಟವಾಗಿದ್ದವು. ಇದರ ವಿರುದ್ಧ ಸಾಕಷ್ಟು ಜನರು ಧ್ವನಿಯನ್ನೂ ಎತ್ತಿದ್ದರು. ಆದರೆ ನಟಿಯ ವಿರುದ್ಧದ ವಿಕೃತಿ ಇನ್ನೊಂದು ಹಂತಕ್ಕೆ ತಲುಪಿದ್ದು, ರಶ್ಮಿಕಾ ಅವರ ಒಂದು ಡೀಪ್‌ ಫೇಕ್‌ ವಿಡಿಯೋ ಸೃಷ್ಟಿಸಿ ಅದನ್ನು ಚಿತ್ರ ವಿಚಿತ್ರ ವಿಕೃತ ಅಡಿಬರಹಗಳೊಂದಿಗೆ ಶೇರ್‌ ಮಾಡಲಾಗುತ್ತಿದೆ. ಮೂಲ ವಿಡಿಯೋದಲ್ಲಿ ಬ್ರಿಟಿಷ್‌ ಇಂಡಿಯನ್‌ ಮಹಿಳೆಯಾದ ಝಾರಾ ಪಟೇಲ್‌ ಎನ್ನುವವರು ಕಪ್ಪು ಉಡುಪಿನಲ್ಲಿ ಎಲಿವೇಟರ್‌ ಮೂಲಕ ಹೊರಬರುತ್ತಾರೆ. ಆ ವಿಡಿಯೋವನ್ನು ತಿರುಚಿ ಅದಕ್ಕೆ ರಶ್ಮಿಕಾ ಅವರ ಮುಖವನ್ನು ಅಂಟಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಧ್ವನಿಯೆತ್ತಿದ್ದು ಈ ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

LEAVE A REPLY

Please enter your comment!
Please enter your name here