ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಿ.ಆರ್.ಝೆಡ್ ಮತ್ತು ನಾನ್ ಸಿ.ಆರ್.ಝೆಡ್ ಎರಡು ವಲಯಗಳಲ್ಲಿ ಮರಳುಗಾರಿಕೆ ಮತ್ತು ಸಾಗಾಣಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು ಕಟ್ಟಡ ಕಾಮಗಾರಿಗಳೆಲ್ಲವೂ ಅರ್ಧದಲ್ಲಿ ನಿಂತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಗಣಿ ಇಲಾಖೆಗೆ ಮತ್ತು ಉಸ್ತುವಾರಿ ಸಚಿವರಿಗೆ ಮನವಿಗಳನ್ನು ನೀಡಿದ್ದರೂ ಯಾವುದೇ ರೀತಿಯಲ್ಲಿ ಮರಳು ಪೂರೈಕೆ ಪ್ರಾರಂಭಗೊಳ್ಳದ ಕಾರಣ ನ.10ರಂದು ಮಧ್ಯಾಹ್ನ 3.00 ಗಂಟೆಯಿಂದ 4.30ರ ನಡುವೆ ನಗರದ ಪುರಭವನದ ಮುಂದುಗಡೆ ಮರಳಿನ ಸಮಸ್ಯೆಯ ಕುರಿತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಷನ್ ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್, ಕೆನರಾ ಬಿಲ್ಡರ್ಸ್ ಅಸೋಸಿಯೇಶನ್, ಕ್ರೆಡಾಯಿ, ಮಂಗಳೂರು, ಕರಾವಳಿ ಅಸೋಸಿಯೇಶನ್, ಸ್ಟೀಲ್ ಡೀಲರ್ಸ್ ಅಸೋಸಿಯೇಶನ್, ಪೈಂಟ್ ಹಾರ್ಡ್ವೇ ಡೀಲರ್ಸ್ ಅಸೋಸಿಯೇಶನ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರುಗಳಾದ ದಿನಾಕರ ಸುವರ್ಣ, ಸತೀಶ್ ಕುಮಾರ್ ಜೋಗಿ, ದೇವಾನಂದ, ಅಶೋಕ್ ಕುಲಾಲ್ ಸುರೇಶ್ ಜೆ ಉಪಸ್ಥಿತರಿದ್ದರು.