ಮಂಗಳೂರು(ಚೆನ್ನೈ): ಭಾರಿ ಮಳೆಯಿಂದ ನೀಲಗಿರಿ ಜಿಲ್ಲೆಯ ಕೋಟಾಗಿರಿ-ಮೆಟ್ಟುಪಾಳ್ಯಂ ರಸ್ತೆಯಲ್ಲಿ ಭೂಕುಸಿತವಾಗಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಬೇರೆ ಮಾರ್ಗವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದ್ದು ಪರಿಹಾರ ಕಾಮಗಾರಿ ಪ್ರಗತಿಯಲ್ಲಿದೆ.
ಭಾರಿ ಮಳೆಯಿಂದಾಗಿ ಕಲ್ಲರ್ ಮತ್ತು ಅಡ್ಡರ್ಲಿ ನಡುವಿನ ರೈಲ್ವೆ ಹಳಿ ಕೆಳಗಿನ ಮಣ್ಣು ಕೊಚ್ಚಿ ಹೋಗಿರುವುದರಿಂದ ನೀಲಗಿರಿ ಬೆಟ್ಟ ರೈಲ್ವೆ ವಿಭಾಗದ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ಮಧುರೈನ ಹಲವಾರು ಭಾಗಗಳು ಜಲಾವೃತಗೊಂಡಿವೆ ಎಂದು ವರದಿಯಾಗಿದೆ. ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಾರುತವು ಬಿರುಸು ಪಡೆದಿದ್ದು, ಕೊಯಂಬತ್ತೂರು, ತಿರುಪ್ಪೂರು, ಮಧುರೈ, ಥೇಣಿ, ದಿಂಡಿಗಲ್ ಸೇರಿದಂತೆ ಐದು ಜಿಲ್ಲೆಗಳು ಹಾಗೂ ನೀಲಗಿರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿನ ಶಾಲಾ ಕಾಲೇಜುಗಳಿಗೆ ನ.9ರಂದು ರಜೆ ಘೋಷಿಸಲಾಗಿದೆ.
ಭಾರತದ ದಕ್ಷಿಣ ಭಾಗದಲ್ಲಿ ಸಾಕಷ್ಟು ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಗಣನೀಯ ಮಳೆಯಾಗುತ್ತಿದ್ದು, ನ.8ರಂದು ಕಣ್ಣೂರು ಜಿಲ್ಲೆಯಲ್ಲಿ 7 ಸೆಂಟಿಮೀಟರ್ ಮಳೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಕೇರಳದಲ್ಲಿ ಭಾರಿ ಮಳೆಯಾಗಲಿದ್ದು, ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಸಾಕಷ್ಟು ವ್ಯಾಪಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ತೆಲಂಗಾಣದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಇದ್ದು, ಮಾನ್ಸೂನ್ ಮಳೆಯ ಪರಿಣಾಮವನ್ನು ಎದುರಿಸಲು ಪ್ರಾಧಿಕಾರಿಗಳು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ.