ಮತ್ತೆ ಕೃಷಿ ಭಾಗ್ಯ ಜಾರಿ – 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಅನುಷ್ಠಾನ-ಸಂಪುಟ ಸಭೆಯ ಪ್ರಮುಖ ನಿರ್ಣಯಗಳ ಪೂರ್ಣ ಮಾಹಿತಿ ಇಲ್ಲಿದೆ

ಮಂಗಳೂರು(ಬೆಂಗಳೂರು): ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಭರವಸೆ ನೀಡಿದಂತೆ ‘ಕೃಷಿ ಭಾಗ್ಯ’ ಯೋಜನೆಯನ್ನು ಮತ್ತೆ ಜಾರಿ ಮಾಡಲು ನ.9ರಂದು ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದೇ ಸಾಲಿನಲ್ಲಿ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದರು. ಸಿದ್ದರಾಮಯ್ಯ ಈ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆ ಜಾರಿ ಮಾಡಿದ್ದರು. ಆ ಬಳಿಕ ಬಂದ ಸರ್ಕಾರಗಳು ಈ ಯೋಜನೆಯನ್ನು ಕೈಬಿಟ್ಟಿದ್ದವು. ಮಳೆ ಆಧಾರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಮಾರ್ಪಡಿಸುವುದು ಯೋಜನೆಯ ಮುಖ್ಯ ಉದ್ದೇಶ. ಮಳೆ ನೀರಿನ ಸಮರ್ಪಕ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಮೂಲಕ ಉತ್ಪಾದಕತೆ ವೃದ್ಧಿಸಲಾಗುವುದು. ಕೃಷಿ ಆದಾಯ ಹೆಚ್ಚಳ ಮತ್ತು ಮಳೆ ನೀರು ವ್ಯರ್ಥವಾಗದಂತೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಯೋಜನೆಯ ಪ್ರಮುಖ ಅಂಶಗಳು ಎಂದು ಪಾಟೀಲ ಹೇಳಿದರು.

ಈ ಸಾಲಿಗೆ ಯೋಜನೆಗೆ ₹200 ಕೋಟಿ ಅನುದಾನ ನೀಡಲಾಗುವುದು:
ಪೂರಕ ಅಂದಾಜಿನಲ್ಲಿ ₹100 ಕೋಟಿ ಒದಗಿಸಲಾಗಿದೆ. ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯಿಂದ ಉಳಿದ ₹100 ಕೋಟಿ ಪಡೆಯಲಾಗುವುದು. ಮಳೆಯಾಶ್ರಿತ ಪ್ರದೇಶದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಇದಕ್ಕಾಗಿ 5 ಒಣಹವೆ ಹವಾಮಾನದ ಜಿಲ್ಲೆಗಳನ್ನೇ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಕೃಷಿ ಸಿಂಚಯಿ ಹೆಚ್ಚುವರಿ 5 ಯೋಜನೆ:
ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ(ನಿಪ್ಪಾಣಿ), ಮಂಡ್ಯ ಜಿಲ್ಲೆಯ ಮಂಡ್ಯ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕುಗಳಲ್ಲಿ ಒಟ್ಟು 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ–ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅಡಿ 5 ಹೆಚ್ಚುವರಿ ಯೋಜನೆಗಳ ಜಾರಿ ಮಾಡಲು ಒಪ್ಪಿಗೆ ನೀಡಲಾಗಿದೆ. ಇದಕ್ಕೆ ₹38.12 ಕೋಟಿ ವೆಚ್ಚವಾಗಲಿದೆ ಎಂದರು.

ಕೇಂದ್ರದ ನಿರ್ಲಕ್ಷ್ಯ:
ಬರ ಪರಿಹಾರ ಬಿಡುಗಡೆ ಮಾಡುವ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿರುವ ಬಗ್ಗೆ ಮತ್ತು ಪ್ರಧಾನಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಹಾಗೂ ಇತರ ಸಚಿವರು ನಮ್ಮ ಸಚಿವರ ಭೇಟಿಗೆ ಅವಕಾಶ ನೀಡದಿರುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಪಾಟೀಲ ಹೇಳಿದರು.

300 ಹೈಟೆಕ್‌ ಹಾರ್ವೆಸ್ಟರ್‌ ಹಬ್‌:
ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು ರಾಜ್ಯ ವ್ಯಾಪಿ ಒಟ್ಟು 300 ಹಾರ್ವೆಸ್ಟರ್‌ ಹಬ್‌ ಫಸಲು ಕಟಾವು ವ್ಯವಸ್ಥೆ ಹಂತ ಹಂತವಾಗಿ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್‌.ಕೆ.‌ಪಾಟೀಲ ತಿಳಿಸಿದರು. 2023– 24 ನೇ ಸಾಲಿನಲ್ಲಿ 100 ಹಾರ್ವೆಸ್ಟರ್‌ ಹಬ್‌ಗಳನ್ನು ಸ್ಥಾಪಿಸಲಾಗುವುದು. ಶೇ 70 ರಷ್ಟು ಸಹಾಯಧನದಲ್ಲಿ ಪ್ರತಿ ಘಟಕಕ್ಕೆ ₹1 ಕೋಟಿ ಮೀರದಂತೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ವಿಮಾ ಕಂಪನಿಗಳ ನಿಗದಿ:
2023–24 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮುಂದುವರೆಸಲು ಅತಿ ಕಡಿಮೆ ವಂತಿಗೆ ನಮೂದಿಸಿರುವ ಬೆಳೆ ವಿಮಾ ಕಂಪನಿಗಳಿಗೆ ನೀಡಿರುವ ಕಾರ್ಯಾದೇಶಗಳಿಗೆ ಸಂಪುಟ ಸಭೆ ಘಟನೋತ್ತರ ಮಂಜೂರಾತಿ ನೀಡಿದೆ. ರಿಲಯನ್ಸ್‌ ಜನರಲ್‌ ಇನ್ಸೂರೆನ್ಸ್‌, ಬಜಾಜ್‌ ಅಲೆಯನ್ಸ್‌ ಇನ್ಸೂರೆನ್ಸ್‌, ಅಗ್ರಿಕಲ್ಚರ್‌ ಇನ್ಸೂರೆನ್ಸ್‌, ಎಸ್‌ಬಿಐ ಜನರಲ್‌ ಇನ್ಸೂರೆನ್ಸ್‌, ಯುನಿವರ್ಸಲ್‌ ಸೊಂಪೊ ಜನರಲ್‌ ಇನ್ಸೂರೆನ್ಸ್‌, ಫ್ಯೂಚರ್ ಜನರಲ್‌ ಇನ್ಸೂರೆನ್ಸ್‌ ಕಂಪನಿಗಳಿಗೆ 5 ಕ್ಲಸ್ಟರ್‌ಗಳಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಪಾಟೀಲ ತಿಳಿಸಿದರು. ಈ ಸಾಲಿಗೆ ₹900 ಕೋಟಿ ಬೇಕಾಗಬಹುದು, ವಿಮಾಕಂತಿನ ದರದಲ್ಲಿ ರೈತರ ವಂತಿಗೆ ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಕಂತುಗಳನ್ನು ಭರಿಸುತ್ತವೆ ಎಂದರು.

ಡಿ.4 ರಿಂದ ಬೆಳಗಾವಿಯಲ್ಲಿ ಅಧಿವೇಶನ:
ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್‌ 4 ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ
ಎಚ್‌.ಕೆ.ಪಾಟೀಲ ಅವರು ತಿಳಿಸಿದರು.

ಪ್ರಮುಖ ನಿರ್ಣಯಗಳು
* ಹಾಲಿ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇದೇ ತಿಂಗಳ 30ಕ್ಕೆ ನಿವೃತ್ತಿ ಹೊಂದುವುದರಿಂದ ಹೊಸ ಮುಖ್ಯ ಕಾರ್ಯದರ್ಶಿ ನೇಮಕದ ಅಧಿಕಾರ ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ.

* ರಾಮನಗರ ಜಿಲ್ಲೆ ಕನಕಪುರದಲ್ಲಿ ಇನ್ಫೋಸಿಸ್‌ ಸಿಎಸ್‌ಆರ್‌ ಯೋಜನೆಯಡಿ 100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದು, ಆಸ್ಪತ್ರೆಗೆ ಅಗತ್ಯವಿರುವ ಜನರೇಟರ್ ಮತ್ತು ಇತರ ಕಾಮಗಾರಿಗಳಿಗೆ ₹10.34 ಕೋಟಿ ಕಾಮಗಾರಿ ಅಂದಾಜು ಪಟ್ಟಿಗೆ ಅನುಮೋದನೆ

* ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿನ 73 ಕೆಪಿಎಸ್‌ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ ₹20 ಕೋಟಿ ವೆಚ್ಚದಲ್ಲಿ ಆವಿಷ್ಕಾರ್‌ ಇನ್ನೋವೇಟಿವ್‌ ಲ್ಯಾಬ್‌ಗಳನನ್ನು ಸ್ಥಾಪಿಸಲು ತೀರ್ಮಾನ

* ಸಂವಿಧಾನ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶ’ ಹೆಸರಿನಲ್ಲಿ ನಡೆಸಲು ₹18 ಕೋಟಿ ಬಿಡುಗಡೆಗೆ ಒಪ್ಪಿಗೆ

* ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹುಬ್ಬಳ್ಳಿ– ಧಾರವಾಡ ನಗರದ ಬಿಆರ್‌ಟಿ ಸೇವೆಗೆ ₹45 ಕೋಟಿ ವೆಚ್ಚದಲ್ಲಿ 100 ಬಸ್‌ಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ

* ಜನನ, ಮರಣ ನೋಂದಣಿ ಅಧಿಕಾರವನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರಿಂದ ಉಪವಿಭಾಗಾಧಿಕಾರಿ ಅವರಿಗೆ ನೀಡುವ ಸಂಬಂಧ ಕರ್ನಾಟಕ ಜನನ ಮರಣ ನೋಂದಣಿ ನಿಯಮಕ್ಕೆ ತಿದ್ದುಪಡಿಗೆ ಒಪ್ಪಿಗೆ. ನೋಂದಣಿ ಶುಲ್ಕ ₹2 ರಿಂದ ₹100 ಕ್ಕೆ ಪರಿಷ್ಕರಣೆ, ವಿಳಂಬ ಆದಲ್ಲಿ(1 ವರ್ಷದೊಳಗೆ) ಶುಲ್ಕ ₹5 ಇದ್ದದ್ದು ₹200 ಕ್ಕೂ, 1 ವರ್ಷ ಆದ ಬಳಿಕ ಶುಲ್ಕ ₹10 ಇದ್ದದ್ದು ₹500ಕ್ಕೆ ಹೆಚ್ಚಳಕ್ಕೆ ತೀರ್ಮಾನ

* ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನ್‌ ಕಾರ್ಯಕ್ರಮದಡಿ ಅಂಗನವಾಡಿಗಳಿಗೆ ‘ಬೆಳವಣಿಗೆ ನಿಗಾ ಸಾಧನ’ಗಳನ್ನು ಖರೀದಿಸಲು ₹28.60 ಕೋಟಿ ಬಿಡುಗಡೆಗೆ ಅನುಮೋದನೆ.

LEAVE A REPLY

Please enter your comment!
Please enter your name here