ರಘುಪತಿ ಭಟ್‌ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ – ಆರೋಪಿ ಅತುಲ್ ರಾವ್ ಗೆ ಜೈಲು ಶಿಕ್ಷೆ

ಮಂಗಳೂರು: ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಉಡುಪಿಯ ಜಿಲ್ಲಾ ಸಿಜೆಎಂ ನ್ಯಾಯಾಲಯ ನ.10ರಂದು ಮಹತ್ವದ ಆದೇಶ ನೀಡಿದೆ. 2008ರ ಜೂ.10ರಂದು ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಉಡುಪಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಈ ಸಂಬಂಧ ಅಂದು ಶಾಸಕರಾಗಿದ್ದ ರಘುಪತಿ ಭಟ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಪದ್ಮಪ್ರಿಯ ದೆಹಲಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದ ಆರೋಪ ಅತುಲ್ ರಾವ್ ಮೇಲಿತ್ತು. ಪ್ರಕರಣದಲ್ಲಿ ಮಣಿಪಾಲ ಠಾಣಾ ಪೊಲೀಸರು ಹಾಗೂ ಸಿಒಡಿ ತನಿಖೆ ಅಧಿಕಾರಿಗಳು ತನಿಖೆ ನಡೆಸಿದ್ದರು. 2009ರಲ್ಲಿ ಅಂತಿಮ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಚಾರ್ಜ್‌ ಶೀಟ್‌ನಲ್ಲಿ ಆರೋಪಿ ಅತುಲ್ ರಾವ್ ನಕಲಿ ದಾಖಲೆ ಸೃಷ್ಟಿಸಿ ಪದ್ಮಪ್ರಿಯ ಅವರು ಅಪಹರಣವಾದ ರೀತಿಯಲ್ಲಿ ದೆಹಲಿಗೆ ಕರೆದೊಯ್ದಿದ್ದ ಎನ್ನಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನ.10ರಂದು ತೀರ್ಪು ಪ್ರಕಟಿಸಿದೆ.

2008ರ ಜೂ.10ರಂದು ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಅವರು ಉಡುಪಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್‌, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದು ಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದ ಎಂದು ದೂರಲಾಗಿದೆ. ಬಳಿಕ ಅತುಲ್‌ ರಾವ್‌ ಪದ್ಮಪ್ರಿಯ ಅವರನ್ನು ತನ್ನ ಕಾರಿನಲ್ಲಿ ಕುಮಟಾದವರೆಗೆ ಕರೆದುಕೊಂಡು ಹೋಗಿದ್ದ. ಕುಮಟಾಕ್ಕೆ ಬೆಂಗಳೂರಿನ ಚಾಲಕನೋರ್ವನನ್ನು ಕರೆಸಿ, ತನ್ನ ಕಾರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದ. ಇತ್ತ ಪದ್ಮಪ್ರಿಯ ಅವರನ್ನು ಅತುಲ್ ರಾವ್‌ ಬಾಡಿಗೆ ಕಾರಿನಲ್ಲಿ ಕುಮಟಾದಿಂದ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ಗೆ ಪದ್ಮಪ್ರಿಯ ಅವರ ಫೋಟೋ ಅಂಟಿಸಿ, ಮೀರಾ ಹೆಸರಿನಲ್ಲಿ ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದ

ಈ ಘಟನೆ ನಡೆಯುವ ಮೊದಲು ದೆಹಲಿಗೆ ಹೋಗಿದ್ದ ಅತುಲ್ ರಾವ್‌, ಅಲ್ಲಿ ಬಾಡಿಗೆ ಮನೆ ಮಾಡಿದ್ದ. ಅದಕ್ಕೆ ಬೆಂಗಳೂರಿನ ನಕಲಿ ವಿಳಾಸ ನೀಡಿ ಬಾಡಿಗೆ ಕರಾರು ಪತ್ರ ಮಾಡಿಕೊಂಡಿದ್ದ. ಇದು ಅಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿತ್ತು. ಆ ಬಾಡಿಗೆ ಕರಾರು ಪತ್ರದಿಂದಲೇ ಅತುಲ್ ರಾವ್‌ ಅಲ್ಲಿ ಬ್ಯಾಂಕ್ ಖಾತೆಯನ್ನೂ ತೆರೆದಿದ್ದ. ತಾನು ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕ್ಲರ್ಕ್‌ ಆಗಿದ್ದರೂ ಅಲ್ಲಿ ತನ್ನ ವಿದ್ಯಾರ್ಹತೆಯನ್ನು ಬಿಇ ಮತ್ತು ಇಂಟಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂಬುದಾಗಿ ಅತುಲ್‌ ಉಲ್ಲೇಖಿಸಿದ್ದ ಎಂದು ದೂರಲಾಗಿದೆ. ಜೂ.10ರಂದು ದೆಹಲಿಗೆ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಅಲ್ಲಿಂದ ಜೂ.12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜೊತೆ ಪದ್ಮಪ್ರಿಯ ಅವರನ್ನು ಹುಡುಕುವ ನಾಟಕ ಮಾಡಿದ್ದ. ತನ್ನ ಪತ್ನಿಯ ನಾಪತ್ತೆ ಕುರಿತು ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಅತುಲ್‌ ರಾವ್‌ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here