ಮಂಗಳೂರು: ಮಂಗಳೂರು ಹೊರವಲಯದ ವಾಮಂಜೂರಿನಲ್ಲಿರುವ ವೈಟ್ ಗ್ರೋ ಅಣಬೆ ಪ್ಯಾಕ್ಟರಿಯಿಂದ ಹೊರಬರುವ ರಾಸಾಯನಿಕ ಗಾಳಿಯಲ್ಲಿ ಬೆರೆತು ಸ್ಥಳೀಯ ಜನರ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ಫ್ಯಾಕ್ಟರಿಯನ್ನು ಬಂದ್ ಮಾಡುವಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಆಗ್ರಹಿಸಿದ್ದಾರೆ. ನ.12ರಂದು ಫ್ಯಾಕ್ಟರಿ ವಿರುದ್ಧ ವಾಮಂಜೂರಿನಲ್ಲಿ ಬಿಜೆಪಿ ವತಿಯಿಂದ ಶಾಸಕ ಡಾ ಭರತ್ ಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರಿಸರದಲ್ಲಿ ದುರ್ನಾತ ಮತ್ತು ಸ್ಥಳೀಯ ಜನರ ಅನಾರೋಗ್ಯಕ್ಕೆ ಪ್ಯಾಕ್ಟರಿ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕೋಡಲೇ ಕಾಂಗ್ರೆಸ್ ಮಾಜಿ ಶಾಸಕ ಜೆ ಆರ್ ಲೋಬೋ ತಮ್ಮ ಫ್ಯಾಕ್ಟರ್ ಬಂದ್ ಮಾಡಬೇಕು. ನಿಮ್ಮ ಹಣಕ್ಕೆ ಜನರ ಹೆಣ ಬೀಳಬಾರದು. ಪರಿಸರದದಲ್ಲಿ ದುರ್ನಾತ ಮತ್ತು ಸ್ಥಳೀಯ ಜನರ ಪ್ರಾಣಕ್ಕೆ ಕಂಟಕವಾಗುತ್ತಿರುವ ಫ್ಯಾಕ್ಟರಿ ಬಂದ್ ಮಾಡದಿದ್ದಲ್ಲಿ, ಮುಂಬರುವ ದಿನಗಳಲ್ಲಿ ಉಗ್ರಹೋರಾಟ ನಡೆಸುತ್ತೇವೆ. ಹೈವೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ರಾಜಕೀಯ ಬಣ್ಣ ಬರಬಾರದು ಎಂದು ಹೋರಾಟ ಮಾಡಿದ್ದೆವು. ನಮ್ಮ ಹೋರಾಟಕ್ಕೆ ಮಣಿದು ಜಿಲ್ಲಾಧಿಕಾರಿಗಳು ಅಣಬೆ ಫ್ಯಾಕ್ಟರಿಯನ್ನು ಮುಚ್ಚಿಸಿದ್ದರು. ಈಗ ಕಾಂಗ್ರೆಸ್ ಸರಕಾರವಿದ್ದು ಮತ್ತೆ ಫ್ಯಾಕ್ಟರಿ ಆರಂಭವಾಗಿದೆ. ಜಿಲ್ಲಾಡಳಿತದ ಮತ್ತು ಪಾಲಿಕೆ ಅಧಿಕಾರಿಗಳು ಫ್ಯಾಕ್ಟರಿ ಪರವಾಗಿ ಕೆಲಸ ಮಾಡುತ್ತಿದ್ದು, ಸ್ಥಳೀಯ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ದುರ್ನಾತದಿಂದ ಮಕ್ಕಳು ವಾಂತಿ ಮಾಡುತ್ತಿದ್ದು, ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ಬಂದ್ ಮಾಡದಿದ್ದಲ್ಲಿ ಮುಂದೆ ನಮ್ಮ ಶಕ್ತಿ ತೋರಿಸುತ್ತೇವೆ. ಮುಂದೆ ನಡೆಯುವ ಅನಾಹುತಗಳಿಗೆ ಮಾಜಿ ಶಾಸಕ ಜೆಆರ್ ಲೋಬೋ ಕಾರಣರಾಗುತ್ತಾರೆ ಎಂದು ಶಾಸಕ ಡಾ ಭರತ್ ಶೆಟ್ಟಿ ಹೇಳಿದ್ದಾರೆ.