ಮಂಗಳೂರು: ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಮ್ಮ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರು ಬಂದ್ರೂ ತೆಗೆದುಕೊಳ್ಳುತ್ತೇವೆ. ಎಂಪಿ ಇಲೆಕ್ಷನ್ ಹತ್ತಿರ ಬರಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತದೆ. ಯಾರು ಅಲ್ಲಿ ರಕ್ಷಣೆ ಕೊಡ್ತಿದ್ದಾರೆ, ಅಲ್ಲಿ ಯಾರು ಇಲ್ಲ. ನಾಯಕನೇ ಇಲ್ಲವೆಂದು ನಾಯಕತ್ವ ಹುಡುಕಿಕೊಂಡು ಬರುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರದ ಬಗ್ಗೆ ಮಾತನಾಡಿ, ವಿಜಯೇಂದ್ರ ಅವರಿಗೆ ಕಾಂಗ್ರೆಸ್ ಶುಭ ಹಾರೈಸುತ್ತದೆ. ಆದರೆ ಬಿಜೆಪಿಯವರೇ ಶುಭ ಹಾರೈಸ್ತಿದ್ದಾರ ಎಂದು ನಾವು ಕೇಳಬೇಕಾಗಿದೆ. ಸಿ.ಟಿ ರವಿ, ಯತ್ನಾಳ್, ಸುನೀಲ್ ಕುಮಾರ್ ಇವತ್ತು ಗಾಯಾಬ್ ಆಗಿದ್ದಾರೆ ಎಂದರು.
ಇದರಿಂದ ಕಾಂಗ್ರೆಸ್ ಮೇಲೆ ಇಫೆಕ್ಟ್ ಆಗುತ್ತದೆ ನಿಜ ಆದರೆ ಒಳ್ಳೆಯ ಇಫೆಕ್ಟ್ ಆಗುತ್ತದೆ. ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದಾದ ನಿರ್ಲಕ್ಷ್ಯದಿಂದ ಕಾಂಗ್ರೆಸ್ ಆಡಳಿತಕ್ಕೆ ಬಂದಿಲ್ಲ. ಕಳೆದ ಸರ್ಕಾರದ ಅವಧಿಯ ಭ್ರಷ್ಟಾಚಾರ, ಬೆಲೆಯೇರಿಕೆ ಈ ಎಲ್ಲಾ ಕಾರಣದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ನಿರ್ಲಕ್ಷ್ಯ ಯಾಕೆ ಮಾಡಿದ್ರು ಎಂದು ಅವರೇ ಹೇಳಬೇಕು. ಇನ್ನು ಕೂಡಾ ಯಡಿಯೂರಪ್ಪರನ್ನು ಕಣ್ಣೀರು ಹಾಕಿ ಸ್ಟೇಜ್ ನಿಂದ ಯಾಕೆ ಇಳಿಸಿದ್ದೆಂದು ಬಿಜೆಪಿಯವರಿಗೆ ಗೊತ್ತಿಲ್ಲ. ಈಗ ವಿಜಯೇಂದ್ರ ಬಂದಿದ್ದಾರೆ ಅವರೇ ಮಾಹಿತಿ ಕೊಡಬಹುದು. ಬಿಜೆಪಿಯಲ್ಲಿ ಹೊಂದಾಣಿಕೆಯಿಲ್ಲ,ನಾಯಕತ್ವದ ಕೊರತೆಯಿದೆ ಎಂದರು.
ಬಿಜೆಪಿಯವರ ವೀಕ್ ನೆಸ್ ಮೇಲೆ ನಾವು ಸ್ಟ್ರಾಟರ್ಜಿ ಮಾಡುವುದಿಲ್ಲ. ನಾವು ನಮ್ಮ ಬಲದ ಮೇಲೆ ಇದ್ದೇವೆ. ಬಿಜೆಪಿಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರನ್ನು ಕಟ್ಕೊಂಡು ನಮಗೇನು ಮಾಡುವುದಕ್ಕಿದೆ. ಆರು ತಿಂಗಳಾಗಿದೆ ಮೇಲ್ಮನೆ ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಬಜೆಟ್ ಭಾಷಣ ಆದರೂ ನಾಯಕನ ಆಯ್ಕೆಯಾಗಿಲ್ಲ. 15 ದಿನದಲ್ಲಿ ಬೆಳಗಾವಿ ಅಧಿವೇಶನ ಪ್ರಾರಂಭವಾಗುತ್ತದೆ. ವಿರೋಧ ಪಕ್ಷದ ನಾಯಕ ಯಾರೆಂದೇ ಗೊತ್ತಿಲ್ಲ ಎಂದರು.
ಜೆಡಿಎಸ್ ಕಚೇರಿ ಗೋಡೆಯ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್ ವಿಚಾರವಾಗಿ ಮಾತನಾಡಿ, ನಾವು ಪೂಸ್ಟರ್ ಹಾಕಿಲ್ಲ. ನಮಗೇನು ಬೇರೆ ಕೆಲಸ ಇಲ್ಲವೇ. ನಾವು ಆಡಳಿತ ನಡೆಸುತ್ತಿದ್ದೇವೆ ಸ್ವಾಮಿ. ಮಾಡಬೇಕಂದ್ರೆ ಬಹಿರಂಗವಾಗಿ ಮಾಡುತ್ತೇವೆ. ಪೇ ಸಿಎಂ ಕ್ಯಾಂಪೇನ್ ಮಾಡಿಲ್ವಾ..?. ಅದೇನು ರಾತ್ರೋ ರಾತ್ರಿ ಹಾಕಿದ್ದಾ. ಎದೆ ತಟ್ಟಿ ಮುಂದೆ ಬಂದು ಭ್ರಷ್ಟಾಚಾರ ಮಾಡ್ತಿದ್ದೀರಿ ಎಂದು ಹೇಳಿದ್ದೇವೆ. ಸಿಬ್ಬಂದಿಯಿಂದ ಕುಮಾರಸ್ವಾಮಿ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆಯೆಂದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿಯವರು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದವರು. ಆದರೆ ಎಲ್ಲರನ್ನೂ ಕತ್ತಲಲ್ಲಿ ಇರಿಸ್ತೀರಿ ಎಂದು ಅವರು ಹೆಚ್ಚು ಬೆಳಕು ತಗೊಳೋದು ಎಷ್ಟು ಸರಿ ಎಂದರು.