ಮಂಗಳೂರು: ರಾಮಕೃಷ್ಣ ಮಿಷನ್ ನ ಸ್ವಚ್ಛ ಮಂಗಳೂರು ಅಭಿಯಾನದ ಭಾಗವಾಗಿ ಎರಡನೇ ತಿಂಗಳ ಶ್ರಮದಾನ ಕಾರ್ಯಕ್ರಮ ನ.19ರಂದು ಹಂಪನಕಟ್ಟೆ ಪರಿಸರದಲ್ಲಿ ಜರುಗಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿ ತಕಾಮಾನಂದಜಿ ಅವರ ದಿವ್ಯ ಸಾನಿಧ್ಯದಲ್ಲಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಹೆಚ್.ವಿ. ಪ್ರಸಾದ್ ಹಾಗೂ ಮಂಗಳೂರಿನ ಎಸ್. ಸಿ. ಎಸ್. ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರಶೇಖರ್ ಸೊರಕೆ ಜಂಟಿಯಾಗಿ ಹಸಿರು ನಿಶಾನೆ ತೋರಿ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಡಾ. ಸತೀಶ್ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿ.ಹೆಚ್.ವಿ. ಪ್ರಸಾದ್ ಮಾತನಾಡಿ “ಮಂಗಳೂರು ರಾಮಕೃಷ್ಣ ಮಿಷನ್ ನ ಸ್ವಚ್ಛ ಮಂಗಳೂರು ಅಭಿಯಾನ ನಿಜಕ್ಕೂ ಪ್ರಶಂಸನಾರ್ಹ ಎಂದು ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕಪಡಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿಜಿ ತಕಾಮಾನಂದಜಿ ಮಾತನಾಡಿ, ಮಂಗಳೂರು ರಾಮಕೃಷ್ಣ ಮಿಷನ್ 2014 ರಿಂದ ನಡೆಸಿದ ಮೊದಲು ಆವೃತ್ತಿಯ ಸ್ವಚ್ಛತಾ ಅಭಿಯಾನದ ಶ್ರೇಯಸ್ಸು ಮಂಗಳೂರಿನ ಜನತೆಗೆ ಹಾಗೂ ಸ್ವಯಂ ಸೇವಕರಿಗೆ ಸಲ್ಲುತ್ತದೆ. ಜನರಿಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ, ಎರಡನೇ ಆವೃತ್ತಿಯಲ್ಲಿ ತಿಂಗಳಿಗೆ ಒಂದು ಶ್ರಮದಾನ ಮತ್ತು ಜನ ಸಂಪರ್ಕ ಅಭಿಯಾನ ನಡೆಯುತ್ತಿದೆ. ಮಂಗಳೂರಿಗರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಗಣ್ಯರು ಸಾಂಕೇತಿಕವಾಗಿ ಹಂಪನಕಟ್ಟೆ ಮುಖ್ಯರಸ್ತೆಯನ್ನು ಸ್ವಚ್ಛಗೊಳಿಸಿದರು. ಕ್ಲಾಕ್ ಟವರ್ ಸುತ್ತಮುತ್ತಲಿನ ಪರಿಸರ, ವೆನ್ಲಾಕ್ ಜಿಲ್ಲಾಸ್ಪತ್ರೆಯ ಆವರಣ ಗೋಡೆ, ವಿಶ್ವವಿದ್ಯಾನಿಲಯ ಕಾಲೇಜಿನ ವರೆಗಿನ ಆವರಣ ಗೋಡೆ, ಕ್ಲಾಕ್ಟವರ್ ನಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ವರೆಗಿನ ರಸ್ತೆ ವಿಭಾಜಕಗಳನ್ನು ಸ್ವಚ್ಛಗೊಳಿಸಲಾಯಿತು.
ಅಭಿಯಾನದ ಸ್ವಯಂ ಸೇವಕರಾದ ದಿನೇಶ್ ಕರ್ಕೇರ, ಸೌರಜ್ ಮಂಗಳೂರು, ವಸಂತಿ ನಾಯಕ್, ಶಿವರಾಮ್ ಅಡ್ಡೂರ್, ಸುನಂದಾ, ಹಿಮ್ಮತ್ ಸಿಂಗ್, ತಾರಾನಾಥ್ ಆಳ್ವ, ಅನಿರುದ್ಧ್ ನಾಯಕ್, ಕುಮಾರ್ ಸತ್ಯನಾರಾಯಣ ಅವಿನಾಶ್ ಅಂಚನ್ ಸೇರಿದಂತೆ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ರಾಕೇಶ್ಕೃಷ್ಣ ಹಾಗೂ ನೇಹಾ ಶೆಟ್ಟಿ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಕೊಡಂಗೆ ಬಾಲಕೃಷ್ಣ ನಾಯಕ್, ಬಾಲಕೃಷ್ಣ ಭಟ್, ಯೋಗೀಶ್ ಕಾರ್ಯತ್ತಡ್ಕ, ಸೀತಾರಾಮ, ಉಮಾನಾಥ ಕೋಟೆಕಾರ್, ಸಂಜಯ್ ಪ್ರಭು, ಕಮಾಲಾಕ್ಷ ಪೈ, ಸತ್ಯನಾರಾಯಣ ಕೆ. ವಿ ಮತ್ತು “ಯುವ” ಶಿಬಿರದ 20 ಶಿಬಿರಾರ್ಥಿಗಳು ಬೆಳ್ಳಾಲ ಗೋಪಿನಾಥ್ರಾವ್, ಗೋಪಾಲ್, ಅಭಿರಾಮ್ ಶಿವಕುಮಾರ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು. ಎಂ.ಆರ್.ಪಿ.ಎಲ್. ಪ್ರಾಯೋಜಕತ್ವ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಈ ಅಭಿಯಾನ ನಡೆಯುತ್ತಿದೆ.