ಬೆಂಗಳೂರು: ನ.25, 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ – ನಮ್ಮ ಕಂಬಳ’ ದ ಕರೆಗೆ ‘ರಾಜ – ಮಹಾರಾಜ’ ಎಂದು ನಾಮಕರಣ ಮಾಡಲಾಗಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ನ. 22 ರಂದು ಬೆಂಗಳೂರಿನ ಗೋಲ್ಡ್‌ಫಿಂಚ್ ಹೊಟೇಲ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಂಬಳ ಆಯೋಜಿಸಬೇಕೆಂದು ಹಲವು ವರ್ಷಗಳ ಹಿಂದೆ ದಿ.ಜೀವರಾಜ್ ಆಳ್ವ ಮತ್ತು ನಾನು ಚರ್ಚಿಸಿದ್ದೆವು. ಬೆಂಗಳೂರಿನಲ್ಲಿರುವ ಕರಾವಳಿಯ 15 ಲಕ್ಷ ಮಂದಿಗೆ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ವೀಕ್ಷಿಸುವ ಅವಕಾಶ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ಆಗಿದೆ’ ಎಂದು ಅವರು ಹೇಳಿದರು.
ಇದು ಪಕ್ಷಾತೀತವಾದ ಕಂಬಳ. ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಬೆಂಗಳೂರಿನಲ್ಲಿರುವ 69 ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ, ಅವರ ಅಭಿಪ್ರಾಯ ಸಲಹೆ ಪಡೆದು ಕಂಬಳ ಆಯೋಜಿಸಲಾಗಿದೆ.
ಎಚ್ ಡಿ ರೇವಣ್ಣ ಸಹಕಾರ
128 ಜೋಡಿ ಕೋಣಗಳ ಮಾಲೀಕರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಕರಾವಳಿಯಿಂದ ಬರುವ ಕೋಣಗಳು, ಮಾಲೀಕರಿಗೆ ಹಾಸನದಲ್ಲಿ ವಿಶ್ರಾಂತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಎಚ್ ಡಿ ರೇವಣ್ಣ ಸಹಕಾರ ನೀಡಲಿದ್ದಾರೆ. ಕರಾವಳಿಯ ಹಳ್ಳಿಯ ಸೊಗಡು, ಫುಡ್ ಕೋರ್ಟ್ ಮುಖಾಂತರ ಅರ್ಥಪೂರ್ಣ, ಶಿಸ್ತುಬದ್ದ ಕಾರ್ಯಕ್ರಮವಾಗಿ ಕಂಬಳ ಮೂಡಿಬರಲಿದೆ’ ಎಂದು ಪ್ರಕಾಶ್ ಶೆಟ್ಟಿ ಹೇಳಿದರು.
ವಿಶ್ವಕ್ಕೆ ಕಂಬಳವನ್ನು ಪರಿಚಯಿಸುವ ಕೆಲಸ – ಅಶೋಕ್ ಕುಮಾರ್ ರೈ
12 ವರ್ಷಗಳ ಹಿಂದೆ ಪೇಟಾದವರು ಕಂಬಳ ಕ್ರೀಡೆಗೆ ತಡೆಯೊಡ್ಡುವ ಕೆಲಸ ಮಾಡಿದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ವಾದ ಮಾಡಿ ಕಂಬಳಕ್ಕೆ ಜಯ ತಂದುಕೊಡುವ ಕೆಲಸ ಮಾಡಿದ್ದೇನೆ. ಕಂಬಳಕ್ಕೆ 700 ವರ್ಷಗಳ ಇತಿಹಾಸವಿದೆ. ಇದನ್ನು ರಾಜ್ಯ, ದೇಶ ಮತ್ತು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
200 ಜೋಡಿ ಕೋಣ ನಿರೀಕ್ಷೆ:
ಕಂಬಳದಲ್ಲಿ 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. 15 ಜೋಡಿ ಕೋಣಗಳು ಬೆಂಗಳೂರು ಕಂಬಳಕ್ಕಾಗಿಯೇ ಖರೀದಿಸಲಾಗಿದೆ. 6-7 ಸಾವಿರ ಮಂದಿ ಕುಳಿತು ವೀಕ್ಷಣೆ ಮಾಡಬಹುದಾದ ಗ್ಯಾಲರಿ ನಿರ್ಮಿಸಲಾಗಿದೆ.
ಫುಡ್ ಕೋರ್ಟ್:
ಫುಡ್ ಕೋರ್ಟ್ ಮುಖಾಂತರ ಕರಾವಳಿಯ ತಿಂಡಿತಿನಿಸುಗಳನ್ನು ತಿನ್ನುವ ಅಪೂರ್ವ ಅವಕಾಶವಿದೆ. ಸುಮಾರು 130 ವಿವಿಧ ಸ್ಟಾಲ್ ಗಳು ಇರಲಿವೆ. 3 ಸಾವಿರ ಮಂದಿ ಕಾರ್ಯಕರ್ತರು, ಮಾಧ್ಯಮದವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇರಲಿದೆ. ಹಲಸಿನ ಹಪ್ಪಳದಿಂದ ಹಿಡಿದು ಕೋರಿ ರೊಟ್ಟಿಯವರೆಗಿನ ಐಟಂಗಳು ಇರಲಿದೆ ಎಂದರು.
ಕಂಬಳ ವೀಕ್ಷಣೆ ಸಂಪೂರ್ಣ ಉಚಿತ:
ವಿಐಪಿ, ವಿವಿಐಪಿ ವ್ಯಕ್ತಿಗಳಿಗೆ ಪ್ರತ್ಯೇಕ ಎಂಟ್ರಿ ಗೇಟ್, ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ಪ್ರತ್ಯೇಕ ಗೇಟ್ ಮೂಲಕ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಕಂಬಳ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕ ಅಥವಾ ಪಾಸ್ ಅಗತ್ಯವಿರುವುದಿಲ್ಲ. ಸಂಪೂರ್ಣ ಉಚಿತವಾಗಿರಲಿದೆ ಎಂದು ಅಶೋಕ್ ರೈ ಸ್ಪಷ್ಟಪಡಿಸಿದರು.
ಬಹುಮಾನ:
ಕಂಬಳ ವಿಜೇತ ಕೋಣಗಳ ಮಾಲೀಕರಿಗೆ ಪ್ರಥಮ ಬಹುಮಾನವಾಗಿ 16 ಗ್ರಾಂ. ಚಿನ್ನ ಮತ್ತು 1 ಲಕ್ಷ ರೂಪಾಯಿ, ದ್ವಿತೀಯ 8 ಗ್ರಾಂ. ಚಿನ್ನ ಮತ್ತು 50 ಸಾವಿರ ರೂಪಾಯಿ, ತೃತೀಯ ಬಹುಮಾನವಾಗಿ 4 ಗ್ರಾಂ. ಚಿನ್ನ ಮತ್ತು 25 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ ರೈ ಬೆಂಗಳೂರಿನ ಕಂಬಳದಲ್ಲಿ ಮಾತ್ರ ತೃತೀಯ ಬಹುಮಾನ ಇಡಲಾಗಿದ್ದು, ಈ ಮೂಲಕ ಕಂಬಳ ಎಂಬುವುದು ಹಣಕ್ಕಾಗಿ ಅಲ್ಲ, ಬದಲಾಗಿ ಅದು ಪ್ರತಿಷ್ಟೆಯ ಪ್ರತೀಕ’ ಎಂಬುದನ್ನು ಇಲ್ಲಿಯೂ ತೋರಿಸಲಾಗಿದೆ’ ಎಂದರು.
50 ಗಂಟೆಗಳಲ್ಲಿ 8 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಸಾರ್ವಜನಿಕರಿಗಾಗಿ 24 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಪಾರ್ಕಿಂಗ್ ಪ್ರತ್ಯೇಕ ಮಾಡಲಾಗಿದೆ. ಸದ್ಯದಲ್ಲಿಯೇ ರೂಟ್ ಮ್ಯಾಪ್ ಕೊಡುವ ಕಾರ್ಯ ನಡೆಯಲಿದೆ ಎಂದು ರೈ ಹೇಳಿದರು.
ಲಕ್ಕಿ ಕೂಪನ್:
ಕಂಬಳದಲ್ಲಿ ಭಾಗವಹಿಸುವವರು ವಿಶೇಷ ಅದೃಷ್ಟದ ಬಹುಮಾನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕಾರು, ಬುಲೆಟ್ ಬೈಕ್ ಮತ್ತು ಎಲೆಕ್ಟ್ರಿಕ್ ಬೈಕ್ ಬಹುಮಾನವಾಗಿ ಸಿಗಲಿದೆ.
ಸಿಎಂ, ಡಿಸಿಎಂ, ಮಂತ್ರಿಗಳು ಭಾಗಿ:
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ವಿವಿಧ ಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಡಿ ವಿ ಸದಾನಂದ ಗೌಡ, ಸ್ಪೀಕರ್ ಯು.ಟಿ. ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೇಂದ್ರದ ಮಂತ್ರಿಗಳು ಸಹಿತ ಹಲವು ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ನ. 24 ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ:
ನ. 24 ರಂದು ತುಳುಕೂಟ ಬೆಂಗಳೂರು ಇದರ 50 ನೇ ವರ್ಷದ ಸಂಭ್ರಮದ ಅಂಗವಾಗಿ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಕಂಬಳ ನಡೆಯುವ ಅರಮನೆ ಮೈದಾನದಲ್ಲಿ ನಡೆಯಲಿದೆ. ತುಳುಕೂಟದ ಮಾಜಿ ಅಧ್ಯಕ್ಷ ಕಲಾಪೋಷಕ ಡಾ.ರವಿ ಶೆಟ್ಟಿ ಮೂಡಂಬೈಲು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ಮಾಧ್ಯಮಗಳಿಗೆ ಸೂಚನೆ:
ಫೊಟೊಗ್ರಫಿ, ವಿಡಿಯೋಗ್ರಫಿ ಸೇರಿದಂತೆ ಮಾಧ್ಯಮ ವಿಭಾಗ ಕಾರ್ಯನಿರ್ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೂ ಊಟೋಪಚಾರ, ಪಾಸ್ ನೀಡುವ ವ್ಯವಸ್ಥೆಗಳಾಗಿವೆ ಎಂದು ಮಾಧ್ಯಮ ವಿಭಾಗದ ಸಂಚಾಲಕ ಮಂಜುನಾಥ್ ಕನ್ಯಾಡಿ ಇದೇ ವೇಳೆ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷ ಡಾ. ರವಿ ಶೆಟ್ಟಿ ಮೂಡಂಬೈಲು ಕತಾರ್, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುರುಕಿರಣ್, ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ, ಉಪಾಧ್ಯಕ್ಷ ಉಪೇಂದ್ರ ಶೆಟ್ಟಿ, ತುಳು ಒಕ್ಕೂಟದ ಗೌರವಾಧ್ಯಕ್ಷ ಕೆ.ವಿ. ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.