ಮಂಗಳೂರು(ಉಡುಪಿ): ಇಲ್ಲಿರುವ ವಿಡಿಯೋ ನೋಡಿ. ಈ ಹುಡುಗನ ಧೈರ್ಯಕ್ಕೆ ನೀವೇ ಶಹಬ್ಬಾಶ್ ಅಂತೀರಾ. 12 ವರ್ಷದ ಈ ಬಾಲಕ ಏಳನೇ ತರಗತಿಯ ವಿದ್ಯಾರ್ಥಿ. ವಿದ್ಯಾರ್ಥಿಯ ಧೈರ್ಯ ಎಷ್ಟಿದೆ ಎಂದರೆ ದೊಡ್ಡದಾದ ಹೆಬ್ಬಾವಿನ ತಲೆಗೇ ಕೈಹಾಕಿ ಹಿಡಿದಿದ್ದಾನೆ ಈ ಪೋರ. ಈತನ ಈ ಸಾಹಸದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಉಡುಪಿ ತಾಲೂಕಿನ ಸಾಲಿಗ್ರಾಮ ದೇವಾಡಿಗರಬೆಟ್ಟು ಗ್ರಾಮದಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಈ ಹುಡುಗ ತಂದೆಯೊಂದಿಗೆ ಅಲ್ಲಿಗೆ ಹೋಗಿದ್ದಾನೆ. ಪೊದೆಯಲ್ಲಿ ಅಡಗಿಕೊಳ್ಳಲು ಪ್ರಯತ್ನಿಸುತ್ತಿದ್ದ ಹೆಬ್ಬಾವಿನ ಬಾಲ ಹಿಡಿದು ಅಪ್ಪ ಎಳೆಯುತ್ತಿದ್ದರೆ, ಈ ಬಾಲಕ ಹೆಬ್ಬಾವಿನ ತಲೆಗೆ ಕೈ ಹಾಕಿ ಹಿಡಿದೆಳೆದಿದ್ದಾನೆ.
ಉಡುಪಿ ಭಾಗದ ಖ್ಯಾತ ಉರಗ ತಜ್ಞ ಸುಧೀಂದ್ರ ಐತಾಳ್ ಅವರ ಪುತ್ರ ಧೀರಜ್ ಐತಾಳ್ ಈ ಸಾಹಸ ಮೆರೆದ ಬಾಲಕ. ಹೆಸರಿಗೆ ತಕ್ಕಂತೆ ಧೀರ. ಎಳವೆಯಿಂದಲೇ ತಂದೆಯೊಂದಿಗೆ ಹಾವುಗಳನ್ನು ನೋಡಿ ಬೆಳೆದ ಧೀರಜ್ ಗೆ ಹಾವುಗಳನ್ನು ಕಂಡರೆ ಭಯವಿಲ್ಲ. ಕೆಲವೊಮ್ಮೆ ತಂದೆಗೆ ಹಾವು ಹಿಡಿಯುವ ಕರೆ ಬಂದಾಗ ಅವರ ಜತೆಗೆ ಹೋಗುತ್ತಿದ್ದ ಅವನಿಗೆ ಬೇರೆ ಬೇರೆ ಹಾವುಗಳನ್ನು ಹೇಗೆ ಹಿಡಿಯಬೇಕು ಎಂಬ ಬಗ್ಗೆ ಮಾಹಿತಿಯೂ ಗೊತ್ತಾಗಿದೆ. ತಂದೆ ಸುಧೀಂದ್ರ ಐತಾಳ್ ಬಾಲದಿಂದ ಹಿಡಿದು ಹಿಂದಕ್ಕೆ ಹೆಬ್ಬಾವನ್ನು ಎಳೆಯುತ್ತಿದ್ದರೆ ಬೃಹತ್ ಗಾತ್ರದ ಆ ಹೆಬ್ಬಾವು ಅವರನ್ನೇ ಮುಂದಕ್ಕೆ ಎಳೆಯುತ್ತಿತ್ತು. ಗ್ರಾಮಸ್ಥರು ಈ ದೃಶ್ಯವನ್ನು ನೋಡುತ್ತಾ ನಿಂತಿದ್ದರೇ ಹೊರತು ಐತಾಳರ ಸಹಾಯಕ್ಕೆ ಬರಲಿಲ್ಲ. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಧೀರಜ್ ತಂದೆಗೆ ಸಹಾಯ ಮಾಡಲು ಮುಂದಾಗಿದ್ದಾನೆ. ಹೆಬ್ಬಾವಿನ ತಲೆ ಹಿಡಿದು ಎಳೆದು ತಂದಿದ್ದಾನೆ. ಹೆಬ್ಬಾವು ಧೀರಜ್ ನ ಹಿಡಿತದಿಂದ ತಪ್ಪಿಸಿಕೊಳ್ಳಲು ಬಿಗಿತ ಹೆಚ್ಚಿಸುತ್ತಿದ್ದಂತೆ ಧೀರಜ್ ಚಾಕಚಕ್ಯತೆಯಿಂದ ಹೆಬ್ಬಾವನ್ನು ಹಿಡಿದಿದ್ದಾನೆ. ಹಾಗೆಂದು ನೀವು ಯಾರೂ ಈ ಪ್ರಯತ್ನಕ್ಕೆ ಕೈ ಹಾಕಬೇಡಿ. ಇದಕ್ಕೆ ತರಬೇತಿ ಮತ್ತು ಅನುಭವದ ಅಗತ್ಯವಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ