ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣ – ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ,- ಯಂತ್ರಗಳನ್ನಿಟ್ಟ ವೇದಿಕೆಯಲ್ಲಿ ಬಿರುಕು – ಕಾರ್ಯಾಚರಣೆಗೆ ಹಿನ್ನಡೆ

ಮಂಗಳೂರು (ಉತ್ತರಕಾಶಿ): ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತ ದುರಂತದಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಅಡ್ಡಿ ಎದುರಾಗಿದ್ದು, ಸುರಂಗ ಕೊರೆಯುವ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.

ಸಿಲ್ಕ್ಯಾರಾ ಸುರಂಗದ ಅವಶೇಷಗಳ ಮೂಲಕ ಕೊರೆಯುವ ಕಾರ್ಯವನ್ನು ನ.23ರಂದು ಸ್ಥಗಿತಗೊಳಿಸಲಾಗಿದೆ. ಉಪಕರಣಗಳನ್ನು ಅಳವಡಿಸಿರುವ ವೇದಿಕೆಯಲ್ಲಿ ಕೆಲವು ಬಿರುಕುಗಳು ಕಾಣಿಸಿಕೊಂಡಿರುವ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಕ್ಕೆ ಮತ್ತೊಂದು ಹಿನ್ನಡೆಯಾಗಿದೆ. 11 ದಿನಗಳಿಂದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರಲು ಕುಸಿದ ಭಾಗದ ಅವಶೇಷಗಳ ಮೂಲಕ ಉಕ್ಕಿನ ಪೈಪ್‌ಗಳ ಭಾಗಗಳನ್ನು ಅಳವಡಿಸಲಾಗುತ್ತಿದೆ. ಆದರೆ ಈ ಕಾರ್ಯಾಚರಣೆ ಬಹಳ ಸವಾಲಿನದ್ದಾಗಿದ್ದು, ಸುರಂಗ ಕೊರೆಯುವ ವೇಳೆ 3-4 ಅಡೆತಡೆಗಳನ್ನು ಎದುರಿಸಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೇನ್ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಸಮಯಾವಧಿಯನ್ನು ಊಹಿಸುವುದು ನ್ಯಾಯಸಮ್ಮತವಲ್ಲ. ಏಕೆಂದರೆ ಅದು ಯುದ್ಧದಂತೆಯೇ ಇರುತ್ತದೆ. ಸುರಂಗದ ಸ್ಥಳದಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಗೆ ತಲಾ ಒಂದರಂತೆ 41 ಆಂಬ್ಯುಲೆನ್ಸ್‌ಗಳು ಸರ್ವ ಸನ್ನದ್ಧ ಸ್ಥಿತಿಯಲ್ಲಿವೆ. ಗಂಭೀರ ಸ್ಥಿತಿಯಲ್ಲಿರುವ ಕಾರ್ಮಿಕರನ್ನು ಏರ್‌ಲಿಫ್ಟ್ ಮಾಡಲು ಸೌಲಭ್ಯಗಳಿವೆ. ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಬೆಳಕು ಅಥವಾ ಆಮ್ಲಜನಕದ ಕೊರತೆಯಿಲ್ಲ. ಅವರಿಗೆ ಆಹಾರ, ನೀರು, ಬಟ್ಟೆ, ಔಷಧಗಳನ್ನು ಪೂರೈಸಲಾಗುತ್ತಿದೆ ಎಂದು ಹಸ್ನೈನ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here