ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್ – ಚೂಪಾಗಿರುವುದರಿಂದ ಗಾಯಗಳಾಗುವ ಸಾಧ್ಯತೆ ಹೆಚ್ಚು – ಪೋಷಕರ ಆಕ್ರೋಶ – ಪೆನ್ಸಿಲ್ ಮಾರಾಟಕ್ಕೆ ಅವಕಾಶ ನೀಡದಂತೆ ಆಗ್ರಹ

ಮಂಗಳೂರು (ಬಂಟ್ವಾಳ): ತಾಲೂಕಿನ ಪ್ರಾಥಮಿಕ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್ ಗಳಿದ್ದು, ಇದನ್ನು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮಕ್ಕಳ ಪೋಷಕರು ಒತ್ತಾಯ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಾರ ಎಂಬಲ್ಲಿ ನಡೆದಿದೆ.ಕೆದಿಲ ಗ್ರಾಮದ ಗಡಿಯಾರ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿ ಈ ಪೆನ್ಸಿಲ್ ಕಂಡು ಬಂದಿದ್ದು, ಪೋಷಕರು ಈ ಪೆನ್ಸಿಲ್ ನ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಈ ಮಾರಾಟಗಾರರು ಮಕ್ಕಳಿಗೆ ಬೇಕಾಗುವ ಪೆನ್ಸಿಲ್ ನ ಆರ್ಡರ್ ಪಡೆದುಕೊಂಡು ಹೋಗುತ್ತಾರೆ. ಅದರ ಬೆಲೆಯನ್ನು ತಿಳಿಸುತ್ತಾರೆ. ಎರಡು ದಿನಗಳ ಬಳಿಕ ಬಂದು ಪೆನ್ಸಿಲ್ ನೀಡುತ್ತಾರೆ ಎಂದು ಪೋಷಕರು ತಿಳಿಸಿದ್ದಾರೆ.

20 ರೂ. ಮುಖ ಬೆಲೆಯ ಈ ಪೆನ್ಸಿಲ್ ನೋಡಲು ಬಲು ಸುಂದರವಾಗಿದೆಯಾದರೂ, ಅದರ ಒಂದು ಭಾಗದಲ್ಲಿ ಕೊಡಲಿಯನ್ನು ಹೋಲುವ ರೀತಿಯಲ್ಲಿದ್ದು, ಇದರಿಂದ ಮಕ್ಕಳ ಕೈಗೆ ಅಥವಾ ಇತರರಿಗೆ ಗಾಯವಾಗುವ ಅವಕಾಶಗಳೇ ಹೆಚ್ಚಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವಿವಾದಾತ್ಮಕ ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳ ಮಾರಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ. ಸಣ್ಣ ಮಕ್ಕಳ ಕೈಗೆ ಕೊಡಲಿ ರೂಪದ ಪೆನ್ಸಿಲ್ ನೀಡಿದರೆ ಅವರ ಭಾವನೆಗಳ ಮೇಲೆ ಪ್ರಭಾವ ಬೀರುವ ಬಗ್ಗೆ ತಿಳಿಯದ ಶಿಕ್ಷಕರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಮಾರಾಟಗಾರರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಇದೇ ರೀತಿಯ ಪೆನ್ಸಿಲ್ ಗಳನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here