ಮಂಗಳೂರು(ಅಥೆನ್ಸ್): ಗ್ರೀಸ್‍ನ ಬಳಿಯ ಲೆಸ್ಬೋಸ್ ದ್ವೀಪದ ಬಳಿ ಕೊಮೊರೊಸ್ ದೇಶದ ಸರಕು ನೌಕೆ ಮುಳುಗಿದ್ದು ಅದರಲ್ಲಿದ್ದ 4 ಭಾರತೀಯರು ಸೇರಿದಂತೆ 14 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಗ್ರೀಸ್‍ನ ಕರಾವಳಿ ಭದ್ರತಾ ಪಡೆ ಹೇಳಿದೆ.
ಈಜಿಪ್ಟ್ ನ ಡೆಖೆಯ್ಲಾ ಬಂದರಿನಿಂದ 6 ಸಾವಿರ ಟನ್ ಉಪ್ಪನ್ನು ಹೇರಿಕೊಂಡು ಟರ್ಕಿಯ ಇಸ್ತಾನ್‍ಬುಲ್‍ಗೆ ಪ್ರಯಾಣ ಆರಂಭಿಸಿದ್ದ ನೌಕೆಯು ನ.26 ರವಿವಾರ ಬೆಳಿಗ್ಗೆ ಲೆಸ್ಬೋಸ್ ದ್ವೀಪದ ನೈಋತ್ಯಕ್ಕೆ 8 ಕಿ.ಮೀ ದೂರದಲ್ಲಿ ಸಮುದ್ರದಲ್ಲಿ ಮುಳುಗಿದೆ. 8 ಈಜಿಪ್ಟ್ ಪ್ರಜೆಗಳು, ಇಬ್ಬರು ಸಿರಿಯ ಪ್ರಜೆಗಳು ಹಾಗೂ 4 ಭಾರತೀಯ ಪ್ರಜೆ ಸೇರಿದಂತೆ ಹಡಗಿನಲ್ಲಿ 14 ಸಿಬ್ಬಂದಿಗಳಿದ್ದರು ಎಂದು ಅಥೆನ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ತಕ್ಷಣ ನೌಕಾಪಡೆಯ ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಉಳಿದವರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯಾಚರಣೆಗೆ 5 ಸರಕು ನೌಕೆಗಳು, ಕರಾವಳಿ ಭದ್ರತಾ ಪಡೆಯ 3 ಹಡಗುಗಳು, ವಾಯುಪಡೆ ಮತ್ತು ನೌಕಾಪಡೆಯ ಒಂದೊಂದು ಹೆಲಿಕಾಪ್ಟರ್ ಬಳಸಲಾಗಿದೆ.