1500ಕ್ಕೂ ಅಧಿಕ ಭ್ರೂಣ ಹತ್ಯೆ-ಕೋಟ್ಯಂತರ ರೂ.ಗಳ ಅವ್ಯವಹಾರ – ಪ್ರಕರಣದಲ್ಲಿ ಭಾಗಿಯಾದವರ ಮಾಹಿತಿ ಲಭ್ಯ-ವ್ಯವಸ್ಥಿತ ಜಾಲ ಭೇದಿಸಿದ ಪೊಲೀಸರು-ಪೊಲೀಸ್ ಆಯುಕ್ತ ಬಿ.ದಯಾನಂದ್ 

ಮಂಗಳೂರು(ಬೆಂಗಳೂರು): ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಆರೋಪಿಗಳು ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಭ್ರೂಣ ಹತ್ಯೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ನ.28ರಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಗಳ ಪೈಕಿ ಭ್ರೂಣ ಲಿಂಗ ಪತ್ತೆಗೆ ಒಂದು ಪೊಲೀಸ್ ತಂಡ, ಹತ್ಯೆಗೆ ಮತ್ತೊಂದು ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಕರೆ ವಿವರಗಳನ್ನು ಕಲೆ ಹಾಕಿದಾಗ ವೈದ್ಯರು ಸೇರಿದಂತೆ ಅನೇಕರು ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ ಎಂದರು. ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಅನೇಕರು ಫೋನ್ ಕರೆ ಸ್ವೀಕರಿಸುತ್ತಿಲ್ಲ. ಆರೋಪಿಗಳು ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡು ದುಷ್ಕೃತ್ಯ ಎಸಗುತ್ತಿದ್ದು, ಪ್ರಕರಣದಲ್ಲಿ ಇಲ್ಲಿಯವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೈಸೂರು ಹಾಗೂ ಮಂಡ್ಯ ಮೂಲದವರಾಗಿದ್ದಾರೆ ಎಂದು ಬಿ.ದಯಾನಂದ್ ತಿಳಿಸಿದರು. ಮಂಡ್ಯದ ಆಲೆಮನೆ, ಮೈಸೂರು ಹಾಗೂ ಬೆಂಗಳೂರಿನ ಬೈಯಪ್ಪನಹಳ್ಳಿಯ ಆಸ್ಪತ್ರೆಗಳಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುತ್ತಿದ್ದರು. ಮಧ್ಯವರ್ತಿಗಳ ಮೂಲಕ ಮಹಿಳೆಯರನ್ನು ಕರೆ ತರಲಾಗುತ್ತಿತ್ತು. ಒಂದು ಭ್ರೂಣ ಹತ್ಯೆಗೆ 20 ಸಾವಿರ ರೂ.ನಂತೆ ಪಡೆದು ಕೃತ್ಯ ಎಸಗುತ್ತಿದ್ದರು. ಈ 3 ತಿಂಗಳ ಅವಧಿಯಲ್ಲಿ ಸುಮಾರು 242 ಭ್ರೂಣ ಹತ್ಯೆ ಮಾಡಿದ್ದಾರೆ. ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಬಿ.ದಯಾನಂದ್ ಹೇಳಿದರು.

LEAVE A REPLY

Please enter your comment!
Please enter your name here