ಮಂಗಳೂರು (ಬೆಂಗಳೂರು): ಬೆಂಗಳೂರು ನಗರದ ರಂಗಶಂಕರದಲ್ಲಿ ನಡೆಯಬೇಕಿದ್ದ ಪ್ಯಾಲೆಸ್ತೀನ್ ಕುರಿತಾದ ಕವನ ವಾಚನ, ಕಿರು ನಾಟಕಗಳ ಪ್ರದರ್ಶನಕ್ಕೆ ಪೊಲೀಸರು ತಡೆಯೊಡ್ಡಿದ್ದರು. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸ ಮಾಡುವುದಿಲ್ಲ. ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳಿಗೆ ನಮ್ಮ ಬೆಂಬಲವಿರಲಿದೆ. ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕಾಗಿ ಅನವಶ್ಯಕ ಗೊಂದಲ ನಿರ್ಮಾಣವಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಮುಂದೆ ಇಂತಹ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕಾರ್ಯಗಳಿಗೆ ಬೆಂಬಲವಾಗಿ ಸರ್ಕಾರ ಸದಾ ನಿಲ್ಲಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ನ.29ರಂದು ಗಾಯಕಿ ಎಂ.ಡಿ. ಪಲ್ಲವಿ, ಶ್ವೇತಾಂಶು ಬೋರಾ, ರಾಮ್ನೀಕ್ ಸಿಂಗ್ ನೇತೃತ್ವದಲ್ಲಿ ಪ್ಯಾಲೆಸ್ತೀನ್ ಕುರಿತಾದ ಕವನ ವಾಚನ, ಕಿರು ನಾಕಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಗಣ್ಯರು ಪೊಲೀಸರು ಮತ್ತು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.