ಮಂಗಳೂರು(ಮಂಡ್ಯ): ಮಂಡ್ಯ ತಾಲೂಕಿನ ಶಿವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಹಾಡ್ಯ ಗ್ರಾಮದ ಬಳಿಯ ಆಲೆಮನೆಯಲ್ಲಿನ ಭ್ರೂಣ ಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯುವೇದ ವೈದ್ಯ ಸತೀಶ್ ಹೆಸರು ಕೇಳಿಬಂದಿತ್ತು. ಈಗ ಸತೀಶ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಾರಿನೊಳಗೆ ಸತೀಶ್ ಅವರ ಮೃತದೇಹ ಪತ್ತೆಯಾಗಿದೆ. ಪ್ರಸ್ತುತ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊಣಸೂರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಸತೀಶ್, ಇದಕ್ಕೂ ಮೊದಲು ಮಂಡ್ಯ ತಾಲೂಕಿನ ಶಿವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಪಾಂಡವಪುರ ತಾಲೂಕು ಹರಳಹಳ್ಳಿ ಗ್ರಾಮದ ಡಾ.ಸತೀಶ್, ಶಿವಳ್ಳಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾಲಕ್ಕೇ ಅದೇ ಶಿವಳ್ಳಿ ಮತ್ತು ಪಾಂಡವಪುರ ತಾಲೂಕಿನ ಸುಂಕಾತೊಣ್ಣುರು ಗ್ರಾಮದಲ್ಲೂ ಖಾಸಗಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದರು.
ಡಾ.ಸತೀಶ್ ಅವರ ವಿರುದ್ದ ಸ್ಥಳೀಯ ಜನರಿಂದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಸೂಕ್ತ ದಾಖಲೆಗಳಿಲ್ಲದ ಕಾರಣ ಕ್ಲಿನಿಕ್ ಗಳನ್ನು ಬಂದ್ ಮಾಡಲಾಗಿತ್ತು. ಭ್ರೂಣ ಲಿಂಗ ಪತ್ತೆ ನಡೆಯುತ್ತಿದ್ದ ಹಾಡ್ಯದ ಆಲೆಮನೆ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಡಾ.ಸತೀಶ್ ವಿರುದ್ಧ ಸ್ಥಳೀಯರು ಆರೋಪ ಮಾಡಿದ್ದರು. ಇದಲ್ಲದೆ, ನ.30ರಂದು ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಈ ವೈದ್ಯರ ವಿರುದ್ಧ ಸಾರ್ವಜನಿಕರು ದೂರಿತ್ತಿದ್ದರು. ಡಾ.ಸತೀಶ್ ಅವರನ್ನು ವಿಚಾರಣೆ ನಡೆಸುವಂತೆ ಸಚಿವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಅವರಿಗೆ ಸೂಚಿಸಿದ್ದರು. ಈಗಾಗಲೇ ಡಾ.ಸತೀಶ್ ಅವರನ್ನು ಎರಡು ಬಾರಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು ಎನ್ನಲಾಗಿದೆ. ವೈದ್ಯನ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.