ಪ್ರಧಾನಿ ಮೋದಿ ಚಿತ್ರ ಇರುವ ʼಸೆಲ್ಫಿ ಪಾಯಿಂಟ್ʼ ಸ್ಥಾಪನೆಗೆ ವಿವಿ, ಕಾಲೇಜುಗಳಿಗೆ ಯುಜಿಸಿ ಸೂಚನೆ-ಮೋದಿ ವರ್ಚಸ್ಸು ರಕ್ಷಿಸಲು ಸೆಲ್ಫಿ ಪಾಯಿಂಟ್-ಜೈರಾಮ್‌ ರಮೇಶ್‌ ವಾಗ್ದಾಳಿ

ಮಂಗಳೂರು(ಹೊಸದಿಲ್ಲಿ): ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಯುಜಿಸಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳ ಹಿನ್ನೆಲೆ ಇರುವ ಸೆಲ್ಫಿ ಪಾಯಿಂಟ್‌ಗಳನ್ನು ಅಥವಾ ತಾಣಗಳನ್ನು ಸ್ಥಾಪಿಸುವಂತೆ ದೇಶದ ಎಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸೂಚನೆ ನೀಡಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಈ ನಿರ್ದೇಶನ ಹೊರಬಿದ್ದಿದೆ ಎಂದು ಟೆಲಿಗ್ರಾಫ್ ಇಂಡಿಯಾ ಡಾಟ್‌ ಕಾಮ್ ವರದಿ ಮಾಡಿದೆ.

ಯುಜಿಸಿಯು ಬಣ್ಣಿಸಿರುವ ‘ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆ’ಗಳತ್ತ ಗಮನ ಸೆಳೆಯುವುದು ಮತ್ತು ತನ್ಮೂಲಕ ಸಾಮೂಹಿಕ ಹೆಮ್ಮೆಯ ಪ್ರಜ್ಞೆಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ಯುಜಿಸಿ ಬಣ್ಣಿಸಿದೆ. ಯುಜಿಸಿಯು ಶಿಕ್ಷಣ ಸಂಸ್ಥೆಗಳು ತಮಗೆ ಸಂಬಂಧವೇ ಇಲ್ಲದ ‘ವ್ಯಕ್ತಿನಿಷ್ಠೆ ನಿರ್ಮಾಣ’ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದೆ ಎಂದು ಅನೇಕ ಶಿಕ್ಷಣ ತಜ್ಞರು ಆರೋಪಿಸಿದ್ದಾರೆ.

ಇನ್ನೊಂದೆಡೆ, ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುಗ್ಗುತ್ತಿರುವ ವರ್ಚಸ್ಸು ರಕ್ಷಿಸಿಕೊಳ್ಳಲು ಈ ರೀತಿಯ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, 10 ವರ್ಷಗಳ ಆಡಳಿತದ ಅಂತ್ಯದಲ್ಲಿ ಹೇಸಿಗೆ ಹುಟ್ಟಿಸುವ ಈ ಸ್ವಯಂ ಪ್ರಚಾರ’ ಕುರಿತು ದೇಶದ ಜನತೆ ರೋಸಿಹೋಗಿದ್ದಾರೆ. ಶೀಘ್ರ ತಕ್ಕ ಉತ್ತರವನ್ನೂ ನೀಡಲಿದ್ದಾರೆ ಎಂದಿದ್ದಾರೆ. ಸೆಲ್ಫಿ ಪಾಯಿಂಟ್ ಸ್ಥಾಪಿಸಬೇಕು ಎಂಬ ಯುಜಿಸಿ ನಿರ್ದೇಶನ ಕುರಿತ ಮಾಧ್ಯಮ ವರದಿಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ‘ಸೆಲ್ಫಿ ಪ್ರಿಯ ಮತ್ತು ಸ್ವಯಂ ಪ್ರಿಯ ನಮ್ಮ ಪ್ರಧಾನಿಗೆ ಈಗ ಲೋಕಸಭೆ ಚುನಾವಣೆ ಎದುರಿಸಲು ಅಭದ್ರತೆ ಕಾಡುತ್ತಿದೆ. ಅದಕ್ಕಾಗಿ ತಮ್ಮ ವರ್ಚಸ್ಸು ರಕ್ಷಣೆಗಾಗಿ ಎಲ್ಲ ಅವಕಾಶ ಬಳಸಿಕೊಳ್ಳುತ್ತಿದ್ದಾರೆ‘ ಎಂದಿದ್ದಾರೆ. ಸೆಲ್ಫಿ ಪಾಯಿಂಟ್‌ ಸ್ಥಾಪಿಸಲು ಮೊದಲು ಸೇನೆ, ಬಳಿಕ ಐಎಎಸ್‌ ಅಧಿಕಾರಿಗಳು, ಹಿರಿಯ ಅಧಿಕಾರಿಗಳಿಗೆ ರಥಯಾತ್ರೆ ಆಯೋಜಿಸುವಂತೆ ಸೂಚಿಸಲಾಗಿತ್ತು. ಈಗ, ಯುಜಿಸಿ ಶಿಕ್ಷಣ ಸಂಸ್ಥೆಗಳಿಗೆ ಇಂತಹ ಸೂಚನೆ ನೀಡಿದೆ’ ಎಂದಿದ್ದಾರೆ.

 

LEAVE A REPLY

Please enter your comment!
Please enter your name here