ಒಂದೂವರೆ ಕೋಟಿ ಬೆಲೆಯ ಕಾರಿಗೆ ಬೈಕ್‌ ಡಿಕ್ಕಿ-ಭವಾನಿ ರೇವಣ್ಣ ಬಾಯಿಂದ ಬಂತು ದಿವ್ಯವಾಣಿ-ದೊಡ್ಡವರ ಸಣ್ಣತನಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ನೆಟ್ಟಿಗರು

ಮಂಗಳೂರು(ಹಾಸನ): ತನ್ನ ಕಾರಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಮಾನವೀಯತೆ ಮರೆತು ಬೈಕ್​ ಸವಾರನನ್ನು ಹಿಗ್ಗಾಮುಗ್ಗಾ ನಿಂದಿಸಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರಿನ ಮುಂಭಾಗಕ್ಕೆ ಕೊಂಚ ಹಾನಿಯಾಗಿದೆ. ಕೂಡಲೇ ಕಾರಿನಿಂದ ಕೆಳಗೆ ಇಳಿದು ಪರಿಶೀಲನೆ ನಡೆಸಿದ ಭವಾನಿ ರೇವಣ್ಣ ಕಾರಿಗೆ ಹಾನಿಯಾಗಿರುವುದನ್ನು ಕಂಡು ತಾಳ್ಮೆ ಕಳೆದುಕೊಂಡಿದ್ದಾರೆ. ನಡುರಸ್ತೆಯಲ್ಲೇ ಬೈಕ್​ ಸವಾರನನ್ನು ಮನಬಂದಂತೆ ಅವಾಚ್ಯ ಪದಗಳಿಂದಲೇ ನಿಂದಿಸಿದ್ದಾರೆ. ಅಪಘಾತಕ್ಕೀಡಾದ ವ್ಯಕ್ತಿಯ ಬಗ್ಗೆ ಕೊಂಚವೂ ಗಮನ ಹರಿಸದೇ ಸಾಯೋ ಹಾಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು, ಒಂದೂವರೆ ಕೋಟಿ ಕಾರೇ ಆಗ್ಬೇಕಿತ್ತಾ? ಎಂದು ಪ್ರಶ್ನಿಸುವ ಮೂಲಕ ಮಾನವೀಯತೆ ಮರೆತು ವರ್ತಿಸಿದ್ದಾರೆ.

ಮಾತ್ರವಲ್ಲದೆ, ಬೈಕ್​ ಸವಾರನ ಬೈಕ್​ ಅನ್ನು ಸುಟ್ಟು ಹಾಕುವಂತೆಯೂ ಕರೆ ನೀಡಿದ್ದಾರೆ. ಗಾಡಿ ಡ್ಯಾಮೇಜ್​ ಆಗಿದೆ. ಇದನ್ನು ರಿಪೇರಿ ಮಾಡಿಸುವುದು ಹೇಗೆ? ಬಂದು ಡಿಕ್ಕಿ ಹೊಡೆಯುವಷ್ಟು ಅರ್ಜೆಂಟ್​ ಏನಿತ್ತು ನಿನಗೆ ಎಂದು ರಸ್ತೆಯಲ್ಲೇ ಕೂಗಾಡಿದ್ದಾರೆ. ಹೋಗಲಿ ಬಿಟ್ಟು ಬಿಡಿ ಎಂದು ಸ್ಥಳೀಯರ ಮಧ್ಯಪ್ರವೇಶಿಸಿ ಕೇಳಿಕೊಂಡರು ಬಿಡದ ಭವಾನಿ ಅವರು ಗಾಡಿ ರಿಪೇರಿ ಮಾಡಿಸೋಕೆ 50 ಲಕ್ಷ ರೂಪಾಯಿಯನ್ನು ನೀವು ಕೊಡ್ತಿರಾ ಎಂದು ಗದರಿದ್ದಾರೆ. ಹಣ ಕೊಡೋ ಹಾಗಿದ್ರೆ ನ್ಯಾಯದ ಮಾತನಾಡಿ ಎಂದು ಸ್ಥಳೀಯರನ್ನೂ ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಭವಾನಿ ರೇವಣ್ಣ, ಬೈಕ್ ಸವಾರನ ಮೊಬೈಲ್‌ ಕಸಿದುಕೊಂಡು ಗಾಡಿ​ ಸೀಜ್​ ಮಾಡಿ, ಸಾಲಿಗ್ರಾಮ ಎಸ್​ಐಗೆ ಸ್ಥಳಕ್ಕೆ ಬರುವಂತೆ ಹೇಳಿ ಎಂದು ಸಹಾಯಕರಿಗೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಾಲಿಗ್ರಾಮ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿ, ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಬೈಕ್‌ ಸವಾರ ಬಿದ್ದಿದ್ದರೂ ಮಾನವೀಯತೆ ಮರೆತ ದೊಡ್ಡ ಗೌಡರ ಸೊಸೆಯನ್ನು ನೋಡುವಾಗ ನಿಜಕ್ಕೂ ಬೇಸರವಾಗುತ್ತೆ, ಬಡವ ಸತ್ರೂ ಇವರಿಗೆ ಚಿಂತೆ ಇಲ್ಲ. ಆದರೆ ಒಂದೂವರೆ ಕೋಟಿ ಕಾರಿಗೆ ಏನೂ ಆಗಬಾರದು. ಇದೇ ನೋಡಿ ದೊಡ್ಡವರ ಸಣ್ಣತನ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here