ಮಂಗಳೂರು: ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದರು. ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ನವರು ಅಂಬೇಡ್ಕರ್ ಸ್ಮರಣೆ ಮಾಡ್ತಾರೋ ಗೊತ್ತಿಲ್ಲ. ಅಂಬೇಡ್ಕರ್ ಬೆನ್ನಿಗೆ ನಿಂತಿದ್ದು ಜನಸಂಘ. ಹಾಗಾಗಿ ದೇಶ ಭಕ್ತ ಅಂಬೇಡ್ಕರ್ ರವರ ವೈಚಾರಿಕ ವಾರಸುದಾರರು ನಾವು ಬಿಜೆಪಿಯವರು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಮಂಗಳೂರು ಬಿಜೆಪಿ ಚುನಾವಣೆ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಸ್ಮರಣಾರ್ಥ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, ಸಂವಿಧಾನ ಕರಡು ಸಮಿತಿಗೆ ಅಂಬೇಡ್ಕರ್ ಅವರನ್ನು ನೇಮಿಸಿದ್ದು ಭಾರತದ ಪುಣ್ಯ. ನಮ್ಮ ದೇಶ ವೈವಿಧ್ಯಮಯ ರಾಷ್ಟ್ರವಾಗಿದ್ದು, ನಾವೆಲ್ಲರೂ ಒಂದು ಅನ್ನೋ ಭಾವ ಜಾಗೃತಿಯಿದೆ. ಮೂಲ ತತ್ವದಲ್ಲಿ ಸರ್ವ ಧರ್ಮ ಸಮಭಾವ ಅನ್ನೋ ವಿಚಾರವಿದೆ. ಇಷ್ಟವಿಲ್ಲದಿದ್ದರೂ ಒಟ್ಟಿಗೆ ಕೂರುದು ಸಹಿಷ್ಣುತೆ. ಭಾರತೀಯತೆ ಉಳಿಯೋದಕ್ಕೆ ಬಿ ಆರ್ ಅಂಬೇಡ್ಕರ್ ರವರ ಸಂವಿಧಾನ ಮೊದಲ ಕಾರಣ ಎಂದು ಅವರು ಹೇಳಿದರು.
ದೇಶದಲ್ಲಿ ಭಾಷಾ ಭಾಂದವ್ಯನ್ನ ಬೆಳೆಸಬೇಕಿತ್ತು. ಆದರೆ ಭಾಷೆಯನ್ನ ಎತ್ತಿ ಕಟ್ಟಿ ರಾಜಕೀಯ ಬೇಳೆ
ಬೇಯಿಸಲು ಪ್ರಯತ್ನ ಪಡಲಾಯಿತು. ಅಸ್ಮಿತೆ ಮುಖ್ಯ, ಆದರೆ ಅಸ್ಮಿತೆಯ ನೆಪದಲ್ಲಿ ಸಮಾಜ ಒಡೆಯುವ ಪ್ರಯತ್ನವೂ ನಡೆಯಿತು. ತಾಯಿ ಭಾರತಿಯ ಮಗಳು ಕರ್ನಾಟಕ ಮಾತೆ ಎಂದು ಹೇಳಿದ ಅವರು, ಜಾತ್ಯಾತೀತ ಚಾಂಪಿಯನ್ ಎನಿಸಿಕೊಳ್ಳುವವರು ಒಂದು ಜಾತಿಗೆ ಆಂಟಿಕೊಂಡಿರುತ್ತಾರೆ. ಜಾತಿಯಿಂದಲೇ ಕೆಲವರ ಅಸ್ತಿತ್ವ ಉಳಿದುಕೊಂಡಿದೆ. ಹಲವರ ನಾಯಕತ್ವವೂ ಉಳಿದಿರುವುದು ಜಾತಿಯಿಂದಲೇ ಎಂದು ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿಟಿ ರವಿ ಅವರೆಲ್ಲರೂ ಜಾತ್ಯತೀತ ನಾಯಕರು. ಎಲ್ಲಾ ಜಾತಿ ಒಂದು ಅನ್ನುವ ನಾವು ಮಾತ್ರ ಕೋಮುವಾದಿಗಳು. ಸರ್ವ ಧರ್ಮ ಮನೋಭಾವ ನಮ್ಮ ಮೂಲ ಧರ್ಮದಲ್ಲಿದೆ. ಮತಾಂಧರನ್ನ ಓಲೈಕೆ ಮಾಡೋದನ್ನೇ ಜಾತ್ಯತೀತ ಎನ್ನುತ್ತಾರೆ. ಓಲೈಕೆಯ ಪರಿಣಾಮವನ್ನ ನಾವು ಇಂದಿಗೂ ಅನುಭವಿಸುತ್ತಿದ್ದೇವೆ ಎಂದು ಹೇಳಿದರು.
ಮಂಗಳೂರಿನ ಬಿಜೆಪಿ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ರನ್ನ ಸ್ಮರಿಸಿದ ಸಿ ಟಿ ರವಿ, ಹೊಟ್ಟೆಪಾಡಿಗಾಗಿ ಸೇನೆಗೆ ಸೇರುತ್ತಾರೆ ಎಂದು ಕೆಲವರು ಹೇಳಿದ್ದರು. ಶ್ರೀಮಂತನಾಗಿದ್ದರೂ ಪ್ರಾಂಜಲ್ ದೇಶ ಸೇವೆಗಾಗಿ ಸೈನ್ಯಕ್ಕೆ ಸೇರಿದ್ದರು. ಸೈನ್ಯಕ್ಕೆ ಸೇರುವಂತಹ ಹಂಬಲ ಆತನನ್ನ ಸೈನಿಕನಾಗಿ ಮಾಡಿತ್ತು ಎಂದು ಪರೋಕ್ಷವಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿಗೆ ಸಿಟಿ ರವಿ ಟಾಂಗ್ ನೀಡಿದರು.
ದೇಶದ ಸಂಪತ್ತಿನ ಪ್ರಥಮ ಅಧಿಕಾರ ದೇಶದ ಬಡವರಿಗೆ ಸೇರಬೇಕು ಎಂದು ಹೇಳಿದ ನರೇಂದ್ರ ಮೋದಿ ಕೋಮುವಾದಿ. ಆದರೆ ಈ ದೇಶದ ಸಂಪತ್ತಿನ ಪ್ರಥಮ ಅಧಿಕಾರ ಮುಸಲ್ಮಾನರಿಗೆ ಸಿಗಬೇಕೆಂದು ಹೇಳಿಕೆ ನೀಡಿದ್ದ ಮನಮೋಹನ್ ಸಿಂಗ್ ಅವರು ಜಾತ್ಯತೀತ ನಾಯಕ. ಕಾಂಗ್ರೆಸ್ ತನ್ನ ಮನಸ್ಥಿತಿಯನ್ನು ಇನ್ನೂ ಬದಲಿಸಿಕೊಂಡಿಲ್ಲ. ಮೌಲ್ವಿಗಳ ಸಭೆಯಲ್ಲಿ ಸಿದ್ದರಾಮಯ್ಯ ಮಾತುಗಳನ್ನ ಕೇಳಿದ್ದೇನೆ. ಟೋಪಿ ಒಂದು ಹಾಕಿರ್ಲಿಲ್ಲ ಹಾಕಿದ್ರೆ ಅವರಿಗೂ ಮೌಲ್ವಿಗಳಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಮುಸಲ್ಮಾನ ಸಮಾಜಕ್ಕೆ 10000 ಸಾವಿರ ಕೋಟಿ ಮೀಸಲಿಡುತ್ತೇನೆ ಎನ್ನುತ್ತಾರೆ. ಆದರೆ ಬಡವರಿಗೆ ಮೀಸಲಿಡುತ್ತೇನೆ ಅನ್ನೋ ಮಾತು ಅವರ ಬಾಯಿಂದ ಬರಲಿಲ್ಲ. ಹೀಗೆ ಹೇಳುವ ಸಿದ್ದರಾಮಯ್ಯ ಸೆಕ್ಯುಲರ್ ಚಾಂಪಿಯನ್. ಸಮಾಜವನ್ನು ಒಡೆಯುವವರು ಸೆಕ್ಯುಲರ್ ಎಂದು ಹೇಳಿಕೊಳ್ಳುತ್ತಾರೆ. ಸೆಕ್ಯುಲರ್ ಪದವನ್ನು ತಪ್ಪಾಗಿ ಬಳಸಲಾಗುತ್ತಿದೆ. ಸೆಕ್ಯುಲರ್ ಅಂದ್ರೆ ಓಲೈಕೆ ಅಲ್ಲ. ಸರ್ವ ಧರ್ಮ ಸಮಭಾವ ಅನ್ನೋದು ಸೆಕ್ಯುಲರೀಸಮ್. ಯಾರು ಹೊರಗಡೆಯಿಂದ ಬಂದ ಮಾನಸಿಕತೆ ತಮ್ಮದು ಎಂದು ಅಂದುಕೊಂಡಿದ್ದರೋ ಅವರೂ ಬದಲಾಗಬೇಕು. ಅವರಲ್ಲಿ ಮತಾಂಧತೆ ಇದೆ. ಮುಖ್ಯಮಂತ್ರಿಗಳು ಸಂಪತ್ತಿನ ಅಧಿಕಾರ ಬಡವರಿಗೆ ಎಂದು ಹೇಳಿರುತ್ತಿದ್ದರೆ ನಾನು ಸಂತಸ ಪಡುತ್ತಿದ್ದೆ. ಭಾರತದ ಮೂಲ ವಿಚಾರಗಳನ್ನು ಒಪ್ಪಿಕೊಳ್ಳುವ ಜನ ಬಹುಸಂಖ್ಯಾತರಾಗಿರುವರೆಗೂ ಸಂವಿಧಾನ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ನಾವೇ ಗೆಲ್ಲುತ್ತೆವೆ ಎಂದು ಕಾಂಗ್ರೆಸ್ ನವರು ಅಂದುಕೊಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ತಪ್ಪಿನಿಂದ ಇವರು ಬಂದಿದ್ದಾರೆ ಎಂದು ಮತದಾರ ಪ್ರಭುಗಳಿಗೆ ಅರ್ಥವಾಗಿದೆ. ಇವರನ್ನ ಇಲ್ಲೇ ಮಟ್ಟ ಹಾಕಿದ್ರೆ ದೇಶಕ್ಕೆ ಒಳ್ಳೇದು ಎಂದು ಜನ ಕಾಂಗ್ರೆಸನ್ನು ಸೋಲಿಸಿದ್ದಾರೆ. ಮತದಾರರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ
ಸೆಮಿ ಫೈನಲೂ ನಮ್ಮದೇ, ಫೈನಲೂ ನಮ್ಮದೇ ಎಂದು ತೋರಿಸಿಕೊಟ್ಟರು. ಕಾಂಗ್ರೆಸ್ ಗೆದ್ದಾಗ ಇವಿಯಂ ಸರಿಯಿದೆ, ಸೋತಾಗ ಇವಿಯಂ ಸರಿಯಿಲ್ಲ. ಕಾಂಗ್ರೆಸ್ ಗೆದ್ದ ತೆಲಂಗಾಣದಲ್ಲಿ ಇವಿಯಂ ಸರಿಯಿದೆ. ಇಂತಹ ಆರೋಪ ಮಾಡುವವರ ವಿರುದ್ಧ ಎಲೆಕ್ಷನ್ ಕಮಿಷನ್ ಕ್ರಿಮಿನಲ್ ಕೇಸ್ ಹಾಕಬೇಕು. ಯಾವ ರೀತಿ ಇವಿಯಂ ಹ್ಯಾಕ್ ಆಯ್ತು ಎಂದು ಇವರು ಪ್ರೂವ್ ಮಾಡಲಿ. 5 ರಾಜ್ಯಗಳಲ್ಲೂ ಜನ ಪೂರ್ಣ ಬಹುಮತ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.