ಕ್ಲಿನಿಕ್, ಲ್ಯಾಬ್‍ಗಳ ಮೇಲೆ ಆರೋಗ್ಯ ಇಲಾಖೆ ದಾಳಿ-ದಾಖಲೆಗಳ ಪರಿಶೀಲನೆ-ಅನಧಿಕೃತ ಸಂಸ್ಥೆಗಳಿಗೆ ಬೀಗಮುದ್ರೆ

ಮಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ವಿರುದ್ಧ  ಕಾರ್ಯಾಚರಣೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ಮುಚ್ಚಿಸಿ, ಬೀಗ ಜಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ, ನೋಂದಾವಣೆಯಾಗದೆ ಮೂಡುಶೆಡ್ಡೆ, ವಾಮಂಜೂರು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಮತ್ತು ನಗರದ ಹಂಪನಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್ಕೊಂದಕ್ಕೆ ಬೀಗಮುದ್ರೆ ಹಾಕಿದ್ದಾರೆ.

ಮಂಗಳೂರು ನಗರ ಗ್ರಾಮ ಪ್ರದೇಶಗಳಲ್ಲಿ ಈಗಾಗಲೇ ಕೆ.ಪಿ.ಎಂ.ಇ.ಎ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದ ಅಲೋಪತಿ ಕ್ಲಿನಿಕ್, ಆಯುಷ್ ಕ್ಲಿನಿಕ್, ಡೆಂಟಲ್ ಕ್ಲಿನಿಕ್, ಜನೆಟಿಕ್ ಲ್ಯಾಬೋರೇಟರಿಗಳು, ಫಿಸಿಯೋಥೆರಪಿ ಸೆಂಟರ್‍ಗಳು ಲ್ಯಾಬ್, ಲ್ಯಾಬ್ ಕಲೆಕ್ಷನ್ ಸೆಂಟರ್‍ಗಳು ಇತ್ಯಾದಿಗಳು ಹಾಗೂ ಈಗಾಗಲೇ ನೋಂದಾವಣೆಯಾಗಿ ನವೀಕರಣ ಮಾಡಲು ಬಾಕಿ ಇರುವ ಸಂಸ್ಥೆಗಳು ಕಡ್ಡಾಯವಾಗಿ ಒಂದು ವಾರದೊಳಗೆ ನೋಂದಾವಣೆ ಮಾಡಲು ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿಯೊಳಗೆ ಸಂಬಂಧಿಸಿದ ಕ್ಲಿನಿಕ್, ಖಾಸಗಿ ಆರೋಗ್ಯ ಸಂಸ್ಥೆಗಳು ನೋಂದಾವಣೆ ಮಾಡದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕೆ.ಪಿ.ಎಂ.ಇ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here