ಮಂಗಳೂರು(ನೆಲಮಂಗಲ): ಮನೆಯ ಮುಂದೆ ಮೇಯಲು ಬಂದ ಹಸುಗಳ ಮೇಲೆ ವೃದ್ಧೆಯೊಬ್ಬರು ಆ್ಯಸಿಡ್ ಎರಚಿ ವಿಕೃತಿ ಮೆರೆದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ವೃದ್ಧೆ ಆ್ಯಸಿಡ್ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ.
ಗ್ರಾಮದ ನಿವಾಸಿ 76 ವರ್ಷದ ಜೋಸೆಫ್ ಗ್ರೇಸ್ ಆ್ಯಸಿಡ್ ಎರಚಿದ ಮಹಿಳೆಯಾಗಿದ್ದು ಕಳೆದ ಮೂರು ದಿನಗಳಿಂದ ಮನೆಯ ಬಳಿ ಮೇಯಲು ಬರುವ ಹಸುಗಳ ಮೇಲೆ ನಿರಂತರವಾಗಿ ಆ್ಯಸಿಡ್ ದಾಳಿ ನಡೆಸಿದ್ದಾರೆ. ಹಸುಗಳಿಗೆ ಬಾತ್ ರೂಂ ಗೆ ಬಳಸುವ ಆ್ಯಸಿಡ್ ಎರಚಿದ್ದು, ಇದು ನಮ್ಮ ಖಾಸಗಿ ಸ್ಥಳ, ಇಲ್ಲಿ ಹಸುಗಳನ್ನು ಬಿಟ್ಟಿರುವುದು ಹಸುವಿನ ಮಾಲೀಕರ ತಪ್ಪು. ಹಸುಗಳು ಮನೆ ಬಳಿ ಬರಬಾರದು ಅಂತ ಹೀಗೆ ಮಾಡಿದ್ದು ಅಷ್ಟೇ. ಬೇರೆ ಉದ್ದೇಶ ನನಗಿಲ್ಲ ಎಂದು ವೃದ್ದೆ ಸಮಜಾಯಿಷಿ ನೀಡಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಘಟನೆಯಿಂದ ನೊಂದ ಹಸುಗಳ ಮಾಲೀಕರು ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ಸುಟ್ಟ ಗಾಯಳಿಂದಾಗಿ ಹಾಲು ಕೂಡ ಕೊಡುತ್ತಿಲ್ಲ ಎಂದು ಮಾಲೀಕರು ಗೋಳಾಡಿದ್ದಾರೆ. ಇನ್ನು ಮಾಲೀಕರ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.