ನಕಲಿ ದಾಖಲೆ ಸೃಷ್ಟಿಸಿ ಆರೋಪಿಗೆ ಜಾಮೀನು-ನ್ಯಾಯಾಲಯಲ್ಲೇ ಫೇಕ್ ಆಧಾರ್‌ ಬಳಸಿದವರು ಅರೆಸ್ಟ್‌

ಮಂಗಳೂರು: ಆಧಾರ್‌ ಕಾರ್ಡ್‌ ನಂಬರ್‌ನ್ನು ಅದಲು ಬದಲು ಮಾಡಿ ನಕಲಿ ದಾಖಲೆ ಸೃಷ್ಟಿಸಿ ವಿವಿಧ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸೆನ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ನ್ಯಾಯಾಲಯಲ್ಲೇ ಫೇಕ್ ಆಧಾರ್‌ ಬಳಸಿದ್ದರು ಎಂದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಆರೋಪಿಗಳು ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುತ್ತಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಫಾಸ್ಟ್ ಟ್ರ್ಯಾಕ್ ಸೆಷನ್ಸ್‌ ನ್ಯಾಯಾಲಯದಲ್ಲಿ ಪೊಕ್ಸೊ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಚಾರಣಾಧೀನ ಖೈದಿ ರಫೀಕ್ ಎಂಬಾತನ ಬಿಡುಗಡೆಗೆ ಉಡುಪಿ ಜಿಲ್ಲೆಯ ಕಳ್ತೂರು ಚಂದ್ರನಗರದ ಅಳ್ನೂರು ಮಸೀದಿ ಬಳಿಯ ನಿವಾಸಿ ಉಮರಬ್ಬ ಮೊಹಿನುದ್ದೀನ್ (50 ವರ್ಷ) ಜಾಮೀನು ನೀಡಿದ್ದರು. ಇದೇ ಪ್ರಕರಣದಲ್ಲಿ ನಾಲ್ಕನೇ ಮತ್ತು ಐದನೇ ಆರೋಪಿಗಳಾದ ಸಾರಮ್ಮ ಮತ್ತು ಆಯಿಷಾ ಬಾನು ಅವರಿಗೂ ಜಾಮೀನು ಭದ್ರತೆ ನೀಡಿದ್ದ.

ಜುಲೈ 26, 2022ರಲ್ಲಿ ಈ ಜಾಮೀನು ನೀಡಿದ್ದ ಸಂದರ್ಭದಲ್ಲಿ ಆತ ನೀಡಿದ್ದ ಆಧಾರ್ ಕಾರ್ಡ್ ನಂಬರ್‌ ಹಾಗೂ 2023ರ ಅಕ್ಟೋಬರ್‌ 30ರಂದು ನೀಡಿದ್ದ ಆಧಾರ್ ಕಾರ್ಡ್‌ ನಂಬರ್ ಬೇರೆ ಬೇರೆಯಾಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ, ಆರೋಪಿಯು ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನಲ್ಲಿ ಇದೇ ರೀತಿ 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿವಿಧ ಆರೋಪಿಗಳಿಗೆ ಜಾಮೀನು ನೀಡಿದ್ದ ಎಂಬ ಮಾಹಿತಿ ಬಯಲಾಗಿದೆ. ಇನ್ನೊಬ್ಬ ಆರೋಪಿ ಕೂಳೂರು ಕಸಬಾ ಬೆಂಗರೆಯ ಮೊಯಿದ್ದೀನ್ ನಾಸಿರ್ (46) ಎಂಬಾತ ಕೂಡ ಇದೇ ರೀತಿ ಆಧಾರ್ ಕಾರ್ಡ್ ನಂಬರ್ ಬದಲಿಸಿ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಎಂದು ತಿಳಿದುಬಂದಿದೆ.

 

 

LEAVE A REPLY

Please enter your comment!
Please enter your name here