ಮಂಗಳೂರು(ಉಡುಪಿ): ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ, ಮಿಥುನ ರಾಶಿಯಿಂದ ಚಿಮ್ಮುವ “ ಜೆಮಿನಿಡ್ “ ಉಲ್ಕಾಪಾತ ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ ವಿಜೃಂಭಿಸಲಿದೆ.
ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುವವಾದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ಡಿ.14 ಮತ್ತು 15ರಂದು ನೂರಕ್ಕಿಂತಲೂ ಹೆಚ್ಚು ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸಬಹುದು. ಈ ಉಲ್ಕೆಗಳು ಹೆಚ್ಚಿನವು ಸೂರ್ಯನ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಬಂಡೆಯ 3200 ಪೇಥಾನ್ ಆಸ್ಟೆರೈೂಯ್ಡ್ ನ ಧೂಳು. ಇಂದು ನಡುರಾತ್ರಿ ಸುಮಾರು 1 ಗಂಟೆಗೆ ನಡುನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳನ್ನು ಗುರುತಿಸಬಹುದೆಂದು ಅಂದಾಜಿಸಿಲಾಗಿದೆ. ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ. ಇಂದು ಬಿಳಿ , ಕೆಂಪು , ಹಳದಿ , ಹಸಿರು ಹಾಗೂ ನೀಲಿ ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು. ನಮ್ಮ ಮೇಲೆಯೇ ಬಿತ್ತು ಎಂದೆನಿಸುವ ಈ ಉಲ್ಕಾಪಾತಗಳು ಭೂ ವಾತಾವರಣದಿಂದಾಗಿ ಸುಮಾರು 60 – 70 ಕಿಮಿ ಎತ್ತರದ ಆಕಾಶದಲ್ಲಿ ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ.