ನಾರಾಯಣ ಗುರು ನಿಗಮಕ್ಕೆ ಡಿ.31ರೊಳಗಾಗಿ 500 ಕೋಟಿ ಅನುದಾನ ಘೋಷಿಸಿ-ಇಲ್ಲವಾದಲ್ಲಿ ಜ.1 ರಿಂದ  ಪ್ರತಿಭಟನೆ-ಸತ್ಯಜಿತ್‌ ಸುರತ್ಕಲ್‌

ಮಂಗಳೂರು: ಚುನಾವಣೆಗೆ ಮೊದಲೇ ಬಿಲ್ಲವ ಸಮುದಾಯದಿಂದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಬೇಡಿಕೆ ಇಡಲಾಗಿತ್ತು. ಬಿಜೆಪಿ ಸರಕಾರ ಕೊನೆ ಕ್ಷಣದಲ್ಲಿ ನಿಗಮ ರಚನೆ ಮಾಡಿ ಘೋಷಣೆಯೂ ಮಾಡಿತ್ತು.‌ ಆದರೆ, ಯಾವುದೇ ಅನುದಾನವನ್ನೂ ನೀಡಿರಲಿಲ್ಲ. ಈಗ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ ಬಿಲ್ಲವ ಮುಖಂಡರು ಬೇಡಿಕೆ ಇಟ್ಟಿದ್ದು, 500 ಕೋಟಿ ರೂಪಾಯಿ ಅನುದಾನವನ್ನು ಡಿಸೆಂಬರೊಳಗೆ ನೀಡಬೇಕು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆ ನಿಗಮ ರಚನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆವು. ಅಧಿವೇಶನದ ಸಮಯದಲ್ಲಿ ಅನುದಾನ ನೀಡಲು ತೊಡಕಾಗುತ್ತದೆ. ಅದರ ಬಳಿಕ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಚಳಿಗಾಲದ ಅಧಿವೇಶನ ಮುಗಿದು 15 ದಿನಗಳೊಳಗೆ ನಾರಾಯಣ ಗುರು ನಿಗಮ ರಚನೆ ಮಾಡಬೇಕು. ಇಲ್ಲದಿದ್ದರೆ ಜ.1 ರ ನಂತರ ಸಮಾಜದ ಎಲ್ಲ ಸ್ವಾಮೀಜಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು, ಕ್ಷೇತ್ರದ ಪ್ರಮುಖರನ್ನು ಒಗ್ಗೂಡಿಸಿ ಬೀದಿಗಿಳಿದು ಜನಾಂದೋಲನ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ನಾರಾಯಣ ಗುರು ಜಯಂತಿ ವೇಳೆ ಅನುದಾನ ಘೋಷಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದೂ ಹುಸಿಯಾಗಿದೆ. ಈಚೆಗೆ ನಡೆದ ಸಮುದಾಯದ ಸಭೆಯಲ್ಲಿ ಸಮಾಜದ ಎಲ್ಲಾ ನಾಯಕರು ಈ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ, ಅಧಿವೇಶನದಲ್ಲಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಅವಕಾಶವಿಲ್ಲ ಎಂದು ಸರಕಾರ ನುಣುಚಿಕೊಂಡಿದೆ‌. ಅಧಿವೇಶನದ ಬಳಿಕ ಸಮಾಜದ ಪ್ರಮುಖರ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿದೆ ಎಂದರು.

ಅಧಿವೇಶನ ಮುಗಿದ ಕೂಡಲೇ ಡಿಸೆಂಬರ್ 31ರೊಳಗೆ ನಿಗಮದ ಹೆಸರಲ್ಲಿ 500 ಕೋಟಿ ರೂಪಾಯಿ ಅನುದಾನ ನೀಡಬೇಕು. ಇಲ್ಲದಿದ್ದಲ್ಲಿ ಜ.1ರ ಬಳಿಕ ಹೋರಾಟ ಅನಿವಾರ್ಯ. ಅಲ್ಲದೆ ಕಾಂತರಾಜು ಆಯೋಗ ವರದಿ ಜಾರಿಗೊಳಿಸಬೇಕು. ಪ್ರವರ್ಗ ಎ ಯಲ್ಲಿ ಈಗಿರುವ 102 ಜಾತಿ ಸಮುದಾಯಗಳಿಗಿರುವ 15 ಶೇ. ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಒತ್ತಾಯಿಸಿದರು. ಸಂಘಟನೆಯ ಪ್ರಮುಖರಾದ ರಾಕೇಶ್ ಪೂಜಾರಿ, ಶಶಿಧರ್ ಅಮೀನ್, ನವೀನ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here