ಮಂಗಳೂರು(ಬೆಂಗಳೂರು): ನಿರ್ದಿಷ್ಟ ರೀತಿಯಲ್ಲಿ ಪ್ರಮಾಣವಚನ ಸ್ವೀಕರಿಸದಿರುವ ಬಗ್ಗೆ ರಾಜ್ಯ ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದ 9 ಸಚಿವರು, 37 ಶಾಸಕರು ನಿಟ್ಟುಸಿರುಬಿಟ್ಟಿದ್ದಾರೆ. ಸಂವಿಧಾನದ ಪ್ರಕಾರ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸದ ಆರೋಪ ಮೇಲೆ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್, ಕೆ.ಎನ್.ರಾಜಣ್ಣ ಸೇರಿದಂತೆ, 9 ಸಚಿವರು ಹಾಗೂ 37 ಶಾಸಕರ ಪ್ರಮಾಣವಚನ ಅಸಾಂವಿಧಾನಿಕವೆಂದು ಘೋಷಿಸುವಂತೆ ಕೋರಿ ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್ ಎಂಬವರು ಹೂಡಿದ್ದ ಪಿಐಎಲ್ ಅನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಶಾಸಕರು ಮತದಾರರಿಂದ ಚುನಾಯಿತರಾಗಿದ್ದಾರೆ. ನಿಗದಿತ ನಮೂನೆಯ ಅಪೂರ್ಣ ಪಾಲನೆ ತಾಂತ್ರಿಕ ಅಂಶವಷ್ಟೇ. ಶಾಸಕರು ನಿರೀಕ್ಷೆಯಂತೆ ಜನರ ಕೆಲಸ ಮಾಡುವುದು ಮುಖ್ಯ. ಕೆಲಸ ಮಾಡದವರು ಆಯ್ಕೆಯಾಗದಂತೆ ನೋಡಿಕೊಳ್ಳುವುದು ಜನರಿಗೆ ಬಿಟ್ಟದ್ದು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಕೆಲವು ಶಾಸಕರು ಹಾಗೂ ಸಚಿವರು ದೇವರ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಕೆಲವರು ಬೇರೆ ಹೆಸರಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ನಿಗದಿತ ನಮೂನೆ ಪ್ರಕಾರ ಸಚಿವರು, ಶಾಸಕರು ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್ ಎನ್ನುವವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.