ಮಂಗಳೂರು(ನವದೆಹಲಿ): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 25 ಕಾರ್ಯಕರ್ತರ ಫೋಟೋಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಬಿಡುಗಡೆ ಮಾಡಿದೆ.
ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಈ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಕೋಮುಗಲಭೆ ಸೃಷ್ಟಿಸಿದ 25 ಪಿಎಫ್ಐ ಕಾರ್ಯಕರ್ತರ ಫೋಟೋಗಳನ್ನು ಎನ್ಐಎ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. 2022ರ ಏಪ್ರಿಲ್ 16ರಂದು ಕೇರಳದ ಪಾಲಕ್ಕಾಡ್ನ ಶ್ರೀನಿವಾಸನ್ ಹತ್ಯೆಯಲ್ಲಿ ಭಾಗಿಯಾಗಿದ್ದ 10 ಪಿಎಫ್ಐ ಮುಖಂಡರು ಸೇರಿದಂತೆ ಬಿಜೆಪಿ ಯುವ ಮುಖಂಡ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಈ ಪಟ್ಟಿಯಲ್ಲಿದ್ದಾರೆ.