ಮಂಗಳೂರು: ಮಂಗಳೂರಿನಲ್ಲಿ ಕೆಪಿಎಸ್ಸಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆಗೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಮಂಗಳೂರಿನ ಬಲ್ಮಠ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆದಿದ್ದು ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೆ ಅಪ್ರಾಪ್ತ ಹುಡುಗರ ಬಳಕೆ ಮಾಡಿಕೊಳ್ಳಲಾಗಿದೆ. ಸಣ್ಣ ಸಣ್ಣ ಮಕ್ಕಳು ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ತಪಾಸಣೆ ಮಾಡುವ ಕಾರ್ಯ ಮಾಡಿದ್ದಾರೆ.
ಸರ್ಕಾರಿ ಪರೀಕ್ಷೆಗೆ ಮಕ್ಕಳನ್ನು ತಪಾಸಣೆಯ ಕಾರ್ಯಕ್ಕೆ ಬಳಸಿಕೊಂಡು ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಪರೀಕ್ಷಾ ಅಕ್ರಮವನ್ನು ತಡೆಯುವ ದೃಷ್ಟಿಯಿಂದ ಮೊಬೈಲ್ ಜಾಮರ್, ಮೆಟಲ್ ಡಿಟೆಕ್ಟರ್, ಬಯೋ ಮೆಟ್ರಿಕ್ ಫೇಸ್ ಡಿಟೆಕ್ಷನ್ ಹಾಗೂ ಬಾಡಿ ಕ್ಯಾಮೆರಾ ಬಳಕೆಗೆ ಕೆಪಿಎಸ್‌ಸಿ ಸೂಚಿಸಿತ್ತು. ಆದರೆ ಇದ್ಯಾವುದು ಗಂಭೀರವಾಗಿ ತೆಗೆದುಕೊಳ್ಳದೇ ಅಪ್ರಾಪ್ತರನ್ನು ಬಳಸಿಕೊಂಡು ಕಾಟಾಚಾರದ ತಪಾಸಣೆಯನ್ನು ನಡೆಸಲಾಗಿದೆ. ಭದ್ರತೆ ಬಗ್ಗೆ ಅರಿವೇ ಇಲ್ಲದ ಮಕ್ಕಳನ್ನು ಪರೀಕ್ಷಾ ಕೇಂದ್ರದ ಭದ್ರತೆಗೆ ನೇಮಕ ಮಾಡಲಾಗಿದೆ. ಕೆಪಿಎಸ್ಸಿ ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಲ್ಮಠ ಕಾಲೇಜು ಸೇರಿ ಮಂಗಳೂರಿನ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಕ್ಕಳಿಂದ ತಪಾಸಣೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಪರೀಕ್ಷಾ ಕೇಂದ್ರಗಳ ತಪಾಸಣೆಗೆ ಕೆಪಿಎಸ್‌ಸಿಯಿಂದಲೇ ಟೆಂಡರ್ ಏಜೆನ್ಸಿ ನೇಮಕವಾಗಿತ್ತು. ಈ ಬಗ್ಗೆ ಏಜೆನ್ಸಿಯವರಲ್ಲಿ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.