ಮಂಗಳೂರು(ಬಾಗಲಕೋಟೆ): ಲೋಕಸಭೆಯ ಸಂಸತ್ ಮೇಲಿನ ಕಲರ್ ಕ್ಯಾನ್ ಸ್ಪ್ರೇ ದಾಳಿ ಪ್ರಕರಣದಲ್ಲಿ ಬಂಧನವಾಗಿರುವ ಮೈಸೂರಿನ ಮನೋರಂಜನ್‌ಗೆ ಬಾಗಲಕೋಟೆ ನಿವೃತ್ತ ಡಿವೈಎಸ್‌ಪಿ ಪುತ್ರ ಸಾಯಿಕೃಷ್ಣ ಎಂಬಾತ ನೆರವಾಗಿದ್ದು, ಸದ್ಯ ಸಾಯಿಕೃಷ್ಣನನ್ನು ಪೊಲೀಸರು ವಿಚಾರಣೆಗೊಳಪಡಿಸಿ ದೆಹಲಿಗೆ ಕರೆದೊಯ್ದಿದ್ದಾರೆ.
ಪ್ರಮುಖ ಆರೋಪಿ ಮನೋರಂಜನ್ ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆದಿದ್ದು, ಈ ಆಧಾರದ ಮೇಲೆ ದೆಹಲಿ ಪೊಲೀಸರು ಸಾಯಿಕೃಷ್ಣನನ್ನು ವಿಚಾರಣೆಗೊಳಡಿಸಿದ್ದಾರೆ. ಮನೋರಂಜನ್ ಹಾಗೂ ಸಾಯಿಕೃಷ್ಡ ಸ್ನೇಹಿತರಾಗಿದ್ದು, ಬೆಂಗಳೂರು ಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ವಿದ್ಯಾಗಿರಿಯ 11ನೇ ಕ್ರಾಸ್ ನಿವಾಸಿಯಾಗಿರುವ ಸಾಯಿಕೃಷ್ಣ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಖಚಿತ ಪಡಿಸಿದ್ದಾರೆ. ನಿವೃತ್ತ ಡಿವೈಎಸ್‌ಪಿ ವಿಠ್ಠಲ ಜಗಲಿ ಎಂಬುವವರ ಪುತ್ರ ಸಾಯಿಕೃಷ್ಣ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಸೀನಿಯರ್ ಎಂಜಿನಿಯರ್ ಆಗಿದ್ದು, ವರ್ಕ್ ಫ್ರಂ ಹೋಂ ಮಾಡುತ್ತಿದ್ದರಿಂದ ಬಾಗಲಕೋಟೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ. ದೆಹಲಿ ಕಮಿಷನರೇಟ್‌ನ ಪಿಎಸ್ಐ ಪಿಂಟು ಶರ್ಮಾ ಹಾಗೂ ಸಿಬ್ಬಂದಿಗಳ ತಂಡ ಡಿ.20ರಂದು ಸಂಜೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ನಿವೃತ್ತ ಡಿವೈಎಸ್ ಪಿ ವಿಠ್ಠಲ ಜಗಲಿ ನಿವಾಸಕ್ಕೆ ಭೇಟಿ ನೀಡಿ ಸಾಯಿಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನವನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಬಳಿಕ ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದ್ದಾರೆ.