ಮಂಗಳೂರು(ಮಲ್ಪೆ): ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಗೊಂಡು, ಬೋಟ್ ನಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟ್ ನವರು ರಕ್ಷಿಸಿದ ಘಟನೆ ನಡೆದಿದೆ.
ಕಡೆಕಾರು ರಕ್ಷಣಾ ಸಂಸ್ಥೆಯ ಶ್ರೀ ನಾರಾಯಣ ಎಂಬ ಬೋಟ್ ಡಿ.12ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಡಿಸೆಂಬರ್ 19 ರಂದು ಬೆಳಗ್ಗೆ ಸಮುದ್ರದಲ್ಲಿ ಮಲ್ಪೆಯಿಂದ 26 ಮಾರು ಆಳದಲ್ಲಿ ದೋಣಿ ಮುಳುಗಡೆಗೊಂಡಿದೆ. ಬೆಳಗ್ಗೆ 6.30ರ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ನೀರಿನಡಿಯಲ್ಲಿ ಯಾವುದೋ ವಸ್ತುವಿಗೆ ತಾಗಿ ದೋಣಿಯ ತಳ ಒಡೆದು ನೀರು ನುಗ್ಗಲು ಆರಂಭಿಸಿದೆ. ಬೋಟ್ ಸಿಬ್ಬಂದಿ ತಕ್ಷಣ ವೈರ್ ಲೆಸ್ ಸಂಪರ್ಕ ಬಳಸಿ ಇತರೆ ಬೋಟ್ ಗಳಿಗೆ ಸಂದೇಶ ರವಾನಿಸಿದ್ದಾರೆ.
ಸಂದೇಶ ಪಡೆದ ಶ್ರೀ ಮೂಕಾಂಬಿಕಾ ಅನುಗ್ರಹ ದೋಣಿಯಲ್ಲಿದ್ದವರು ಸ್ಥಳಕ್ಕೆ ಧಾವಿಸಿ ಮುಳುಗುತ್ತಿರುವ ದೋಣಿಯನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಸಮುದ್ರದಲ್ಲಿ ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಅವರ ಪ್ರಯತ್ನ ವ್ಯರ್ಥವಾಗಿದೆ. 8 ಗಂಟೆ ವೇಳೆಗೆ ದೋಣಿ ಸಂಪೂರ್ಣ ಮುಳುಗಡೆಯಾಗಿದೆ. ಆದರೆ ಬೋಟ್ ನಲ್ಲಿದ್ದ ಮೀನುಗಾರರನ್ನು ಮೂಕಾಂಬಿಕಾ ದೋಣಿಯ ಮೂಲಕ ಮರಳಿ ದಡಕ್ಕೆ ಕರೆತರಲಾಯಿತು. ಈ ಘಟನೆಯಿಂದ ಸುಮಾರು 18 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.