ಜ. 6ರಂದು ನಿಗದಿತ ಬಿಂದು ಸೇರಲಿರುವ ‘ಆದಿತ್ಯ–ಎಲ್‌ 1ʼ ನೌಕೆ– ಇಸ್ರೊ ಅಧ್ಯಕ್ಷ ಸೋಮನಾಥ್ ಮಾಹಿತಿ

ಮಂಗಳೂರು(ಅಹಮದಾಬಾದ್): ‘ಸೂರ್ಯನ ಅಧ್ಯಯನಕ್ಕಾಗಿ ಭಾರತ ನಿರ್ಮಿಸಿರುವ ಪ್ರಥಮ ಅಂತರಿಕ್ಷ ವೀಕ್ಷಣಾಲಯ ಆದಿತ್ಯ ಎಲ್‌1 ಯೋಜನೆಯ ನೌಕೆಯು ನಿಗದಿತ ಲಗ್ರಾಂಜಿಯನ್ ಬಿಂದು ಎಲ್ 1 ಅನ್ನು ಜ. 6ರಂದು ತಲುಪಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ವಿಜ್ಞಾನ ಭಾರತಿ ಎಂಬ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿರುವ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ‘ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಎಲ್‌1ಗೆ ತಲುಪಲು ಸೆಪ್ಟೆಂಬರ್ 2ರಂದು ಶ್ರೀಹರಿಕೋಟದ ಇಸ್ರೊ ಉಡಾವಣಾ ಕೇಂದ್ರದಿಂದ ‘ಆದಿತ್ಯ–ಎಲ್‌ 1’ ನೌಕೆ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್‌ ನಭಕ್ಕೆ ಚಿಮ್ಮಿತ್ತು. ಒಂದು ಬಾರಿ ಎಲ್‌1 ಬಿಂದುವನ್ನು ನೌಕೆ ತಲುಪಿದ ನಂತರ, ಎಂಜಿನ್‌ ಅನ್ನು ಮರು ಆರಂಭಿಸಲಾಗುವುದು. ಇದರಿಂದ ನೌಕೆಯು ಮತ್ತೆ ಮುಂದೆ ಹೋಗದಂತೆ ಇದು ಕೆಲಸ ಮಾಡಲಿದೆ. ಜತೆಗೆ ಅಲ್ಲಿಯೇ ಸುತ್ತುತ್ತಾ ಎಲ್‌1ನಲ್ಲಿಯೇ ಸಿಲುಕಿಕೊಳ್ಳಲಿದೆ’ ಎಂದು ವಿವರಿಸಿದರು. ‘ಈ ಹಂತದ ನಂತರ ಮುಂದಿನ ಐದು ವರ್ಷಗಳವರೆಗೆ ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ನೌಕೆ ಗಮನಿಸುತ್ತದೆ. ಇದರಲ್ಲಿ ಅಳವಡಿಸಿರುವ ಉಪಕರಣಗಳು ಸಂಗ್ರಹಿಸುವ ಮಾಹಿತಿಯು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಬಹುಮುಖ್ಯವಾಗಿರಲಿದೆ’ ಎಂದು ಸೋಮನಾಥ್ ತಿಳಿಸಿದರು.

‘ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ. ಇವುಗಳಿಂದ ಲಭ್ಯವಾಗುವ ಮಾಹಿತಿಯು ಸೂರ್ಯನನ್ನು ಅರಿಯಲು ಹಾಗೂ ಅದು ಭೂಮಿಯ ಮೇಲಿರುವ ಜೀವಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ಅಂಶಗಳ ಕುರಿತು ಮಾಹಿತಿ ನೀಡಲಿದೆ’ ಎಂದರು. ‘ಭಾರತದ್ದೇ ಆದ ಪ್ರತ್ಯೇಕ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಯೋಜನೆಯನ್ನು ಇಸ್ರೊ ಹಾಕಿಕೊಂಡಿದೆ. ಇದನ್ನು ‘ಭಾರತೀಯ ಸ್ಪೇಸ್ ಸ್ಟೇಷನ್‌’ ಎಂದು ಕರೆಯಲಾಗುವುದು. ‍ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ‘ಅಮೃತ್‌ ಕಾಲ್‌’ನಲ್ಲಿ ಇದನ್ನು ಸ್ಥಾಪಿಸಲಾಗುವುದು. ಆ ಮೂಲಕ ಹೊಸ ತಲೆಮಾರಿಗೆ ಹೊಸ ಬಗೆಯ ಆರ್ಥಿಕತೆಯನ್ನು ಸೃಷ್ಟಿಸುವ ಯೋಜನೆ ಹೊಂದಲಾಗಿದೆ’ ಎಂದು ಸೋಮನಾಥ್ ಹೇಳಿದರು.

LEAVE A REPLY

Please enter your comment!
Please enter your name here