ಮಂಗಳೂರು: ಮಂಗಳೂರಿನ ಉಳ್ಳಾಲ ಬಟ್ಟಪಾಡಿ ಸಮೀಪ ಅರಬ್ಬೀ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸರಕು ಸಾಗಾಟ ಹಡಗೊಂದು ಮುಳುಗಡೆಯಾಗಿ ಸರಿಸುಮಾರು ಒಂದೂವರೆ ವರ್ಷವಾಗಿದೆ. ಚೀನದಿಂದ ಲೆಬನಾನ್ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ವೇಳೆ ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಡೆಯಾಗಿದ್ದ ಹಡಗಿನಿಂದ ಡೀಸೆಲ್ನ್ನು ಹೊರತೆಗೆಯಲಾಗಿತ್ತು. ಹಡಗು ಮುಟ್ಟುಗೋಲು ಹಾಕಲು ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಇತರ ಅಧಿಕಾರಿಗಳು, ತಜ್ಞರು ಒಳಗೊಂಡ ಜಿಲ್ಲಾಧಿಕಾರಿ ನೇತೃತ್ವದ ತಂಡ ಸಮುದ್ರಕ್ಕೆ ತೆರಳಿ ಮುಳುಗಡೆಯಾಗಿದ್ದ ಎಂವಿ ಪ್ರಿನ್ಸೆಸ್ ಮಿರಾಲ್ ಹಡಗಿನ ಪ್ರಸ್ತುತ ಸ್ಥಿತಿಗತಿಗಳ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಉಳ್ಳಾಲ ತೀರಕ್ಕೆ ಸನಿಹದಲ್ಲೇ ಈ ವಿದೇಶಿ ಹಡಗು 2022 ಜೂನ್ 20 ರಂದು ಪ್ರತಿಕೂಲ ಹವಾಮಾನ ವೈಪರಿತ್ಯದಿಂದಾಗಿ ಅವಘಡಕ್ಕೀಡಾಗಿ ಅರಬ್ಬೀ ಸಮುದ್ರದಲ್ಲಿ ಮುಳಗಡೆಯಾಗಿತ್ತು, 8,000 ಟನ್ ಉಕ್ಕಿನ ಕಾಯಿಲ್ ತುಂಬಿಸಿಕೊಂಡು ಚೀನಾದ ಟಿಯಾಂಜಿನ್ನಿಂದ ಲೆಬನಾನ್ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಈ ಸಂದರ್ಭ ಹಡಗಿನಲ್ಲಿದ್ದ 15 ಸಿರಿಯಾ ದೇಶದ ನಾವಿಕರನ್ನು ಕೋಸ್ಟ್ ಗಾರ್ಡ್ ಸಹಾಯದಿಂದ ರಕ್ಷಿಸಲಾಗಿತ್ತು. ಹಡಗು ಮುಳುಗಡೆಯಾಗಿ ಸರಿ ಸುಮಾರು 18 ತಿಂಗಳು ಕಳೆದಿದೆ. ಹಡಗಿನ ಅವಶೇಷಗಳಿಂದ ಈ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಭಾರಿ ತೊಂದರೆ ಎದುರಾಗುತ್ತಿದ್ದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೀನಿನ ಬಲೆಗಳು ಹಡಗಿನ ಅವಶೇಷಗಳಿಗೆ ಸಿಲುಕಿ ವ್ಯಾಪಕ ನಷ್ಟ ಅನುಭವಿಸುತ್ತಿದ್ದಾರೆ.
ಯುಎಇಗೆ ಸೇರಿದ ಮೊಂಜಾಸ ಡಿಎಂಸಿಸಿ ಎಂಬ ಕಂಪೆನಿಯು ಹೈಕೊರ್ಟ್ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ ತೈಲ ಪೂರೈಕೆ ಮಾಡಿದಕ್ಕೆ 1.39 ಕೋಟಿ ರೂಪಾಯಿ ಬಾಕಿ ಬರಬೇಕಾಗಿದ್ದು ಶಿಪಿಂಗ್ ಕಂಪೆನಿಯಿಂದ ಇದುವರೆಗೂ ಹಣ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಹಣ ಬರುವವರೆಗೂ ಪ್ರಿನ್ಸೆಸ್ ಮಿರಾಲ್ ಹಡಗನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಹಡಗಿನ ಬಿಡಿಭಾಗಗಳನ್ನು ಮಾರಾಟ ಮಾಡಿಸಿ ಅದರಿಂದ ಬರುವ ಮೊತ್ತದಿಂದ ತನ್ನ ನಷ್ಟವನ್ನು ಭರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡಿತ್ತು. ಅದರಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ನವೆಂಬರ್ ತಿಂಗಳಿನಲ್ಲಿ ಆದೇಶ ನೀಡಿ ಹಡಗನ್ನು ಮುಟ್ಟುಗೋಲು ಹಾಕುವಂತೆ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಆದರೆ ನೌಕೆಯು ಮುಳುಗಡೆಯಾದ ಪ್ರದೇಶ ತನ್ನ ವ್ಯಾಪ್ತಿಯಲ್ಲಿಲ್ಲ ಬದಲಾಗಿ ರಾಜ್ಯ ಸರಕಾರದ ಅಧೀನ ವ್ಯಾಪ್ತಿಯ ಹಳೇ ಬಂದರು ಪ್ರದೇಶಕ್ಕೆ ಸೇರಿದ್ದಾಗಿ ಮತ್ತು ಜಿಲ್ಲಾಡಳಿತ ಈ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟಿಗೆ ಎನ್ಎಂಪಿಎ ಮನವರಿಕೆ ಮಾಡಿತ್ತು. ಇದೀಗ ಹಡಗು ಮುಟ್ಟುಗೋಲು ಹಾಕಲು ಹೈಕೋರ್ಟ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಇತರ ಅಧಿಕಾರಿಗಳು, ತಜ್ಞರು ಒಳಗೊಂಡ ಜಿಲ್ಲಾಧಿಕಾರಿ ನೇತೃತ್ವದ ತಂಡ ಸಮುದ್ರಕ್ಕೆ ತೆರಳಿ ಮುಳುಗಡೆಯಾಗಿದ್ದ ಎಂವಿ ಪ್ರಿನ್ಸೆಸ್ ಮಿರಾಲ್ ಹಡಗಿನ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಪ್ರಸ್ತುತ ಹಡಗಿನ ಸ್ಥಿತಿಗತಿಗಳ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಯಾವಾಗ ಹಡಗು ಇಲ್ಲಿಂದ ತೆರವಾಗುತ್ತೆ ಎನ್ನುವ ನೆಲೆಯಲ್ಲಿ ಸ್ಥಳೀಯ ಮೀನುಗಾರರು ನಿರೀಕ್ಷೆಯಲ್ಲಿದ್ದಾರೆ.