ಮಂಗಳೂರು(ಒಡಿಶಾ): ಒಡಿಶಾದ ಸರಸಪಾಸಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಪಾಪಿ ಮಗನೊಬ್ಬ ಹೊತ್ತು ಹೆತ್ತು ಸಲಹಿದ ತಾಯಿಯನ್ನೇ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ.
ತಾನು ಬೆಳೆದಿದ್ದ ಹೂಕೋಸು ಕಿತ್ತು ತಂದಿದ್ದಕ್ಕೆ ಹೆತ್ತ ಅಮ್ಮನಿಗೆ ಕೊಡಬಾರದ ಶಿಕ್ಷೆ ನೀಡಿದ್ದಾನೆ. ಹೆತ್ತಮ್ಮನ ಮೇಲೆ ಹಲ್ಲೆ ನಡೆಸಿ ಬಳಿಕ ಹೊಲದಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾನೆ. 70 ವರ್ಷದ ವೃದ್ಧೆ ತಾಯಿ ತನ್ನ ಕಿರಿಯ ಮಗನ ಜಮೀನಿನಲ್ಲಿ ಬೆಳೆಯಲಾಗಿದ್ದ ತರಕಾರಿ ಹೂಕೋಸನ್ನು ಕೊಯ್ದು ತಂದು ಮನೆಯಲ್ಲಿ ಅಡುಗೆ ಮಾಡಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಪುತ್ರ ಆಕೆಗೆ ಈ ಶಿಕ್ಷೆ ನೀಡಿದ್ದಾನೆ. ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿರೋ ದೃಶ್ಯ ಸ್ಥಳೀಯರ ಕಣ್ಣಿಗೆ ಬಿದ್ದಿದ್ದು, ಕೂಡಲೇ ಆಕೆಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಊರಿನ ಜನರಿಗೂ ಈತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಕೊನೆಗೂ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘನಂದಾರಿ ಕೆಲಸ ಮಾಡಿದ ಮಗನ ವಿರುದ್ಧ ಪೊಲೀಸರಿಗೆ ದೂರೂ ನೀಡಿದ್ದಾರೆ. ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.