ಮಂಗಳೂರು: ದಿನಸಿ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡ ಘಟನೆ ನಗರದ ಮಣ್ಣಗುಡ್ಡದಲ್ಲಿ ಡಿ.25ರ ಮುಂಜಾನೆ ನಡೆದಿದೆ.
ಮಣ್ಣಗುಡ್ಡದ ಮಠದಕಣಿ ಮಿಶನ್ ಗೋರಿ ರಸ್ತೆಯಲ್ಲಿರುವ ಸಂದೀಪ್ ಎಂಬವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮುಂಜಾನೆ 5.30ರ ಸುಮಾರಿಗೆ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದವರು ಸಕಾಲದಲ್ಲಿ ಬಂದು ಬೆಂಕಿ ನಂದಿಸಿದ ಕಾರಣ ಇತರ ಅಂಗಡಿಗಳು ಬೆಂಕಿಯಿಂದ ಪಾರಾಗಿವೆ.