ಮಂಗಳೂರು(ಕೋಲ್ಕತ್ತ): ಈ ನೆಲದ ಕಾನೂನಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳ್ಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ.26ರಂದು ಹೇಳಿದ್ದಾರೆ.
ನಗರದಲ್ಲಿ ನಡೆದ ರಾಜ್ಯ ಬಿಜೆಪಿಯ ಸಾಮಾಜಿಕ ಮಾಧ್ಯಮ ಮತ್ತು ಐಟಿ ವಿಭಾಗದ ಆಂತರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಸಿಎಎ ಜಾರಿಗೊಳಿಸುವುದು ತಮ್ಮ ಪಕ್ಷದ ಬದ್ಧತೆಯ ವಿಚಾರ ಎಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಾವೆಲ್ಲ ಕೆಲಸ ಮಾಡಬೇಕಿದೆ. ಬಿಜೆಪಿ ಸರ್ಕಾರ ರಚನೆಯಾದರೆ, ಒಳನುಸುಳುವಿಕೆ, ಗೋವುಗಳ ಕಳ್ಳಸಾಗಣೆಗೆ ಕಡಿವಾಣ ಬೀಳಲಿದೆ. ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾದವರಿಗೆ ಸಿಎಎ ಮೂಲಕ ಪೌರತ್ವ ಸಿಗಲಿದೆ’ ಎಂದು ಅವರು ಹೇಳಿದ್ದಾರೆ.
‘ಸಿಎಎ ಜಾರಿಯಾಗುತ್ತದೆಯೇ, ಇಲ್ಲವೇ ಎಂಬ ವಿಚಾರವಾಗಿ ಮಮತಾ ಬ್ಯಾನರ್ಜಿ ಇಲ್ಲಿನ ಜನರನ್ನು, ನಿರಾಶ್ರಿತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸಿಎಎ ಈ ನೆಲದ ಕಾನೂನು. ಅದು ಜಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ನಮ್ಮ ಪಕ್ಷದ ಬದ್ಧತೆಯ ವಿಚಾರವಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಈ ಸಿಎಎ ಕಾನೂನಿನ ಜಾರಿ ವಿಚಾರವು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಲು ನೆರವಾಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.