ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಕಾರು ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯುವತಿಯ ಸಾವು 

ಮಂಗಳೂರು(ಬಂಟ್ವಾಳ): ಡಿ.28ರ ಸಂಜೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಬಿ.ಸಿ‌.ರೋಡ್ ಕೈಕಂಬದಲ್ಲಿ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಯುವತಿ ಮೃತಪಟ್ಟಿದ್ದಾರೆ.

ಬಿಸಿರೋಡಿನ ಕೈಕಂಬ ‌ಸಮೀಪದ ಪಚ್ಚಿನಡ್ಕ ಎಂಬಲ್ಲಿ ನಿನ್ನೆ ರಾತ್ರಿ ಅಪಘಾತ ನಡೆದಿದ್ದು ಸ್ಥಳೀಯ ‌ನಿವಾಸಿ ಚೈತ್ರಾ (22) ಮೃತಪಟ್ಟಿದ್ದಾರೆ. ಮಂಗಳೂರಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ಸಂಜೆ ವೇಳೆ ಬಸ್ಸಿನಲ್ಲಿ ಬಿಸಿ ರೋಡ್ ಗೆ ಬಂದಿದ್ದು, ಸ್ನೇಹಿತೆಯ ರೋಸ್‌ ಕಾರ್ಯಕ್ರಮಕ್ಕೆ ತಾಯಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಯುವತಿಗೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು ಬಳಿಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆಯ ಕಾಂಪೌಂಡ್ ಗೋಡೆಗೆ ಡಿಕ್ಕಿಯಾಗಿ ನಿಂತಿದೆ. ಘಟನೆ ಬೆನ್ನಲ್ಲೇ ಕಾರನ್ನು ಬಿಟ್ಟು ಅದರಲ್ಲಿದ್ದ ಮೂವರು ಯುವಕರು ಪರಾರಿಯಾಗಿದ್ದಾರೆ. ಇದೇ ವೇಳೆ, ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ.ಸುರೇಶ್ ಪಡಾರ್ ಹಾಗೂ ಹೆಚ್.ಸಿ.ರಮೇಶ್ ತಮ್ಮ ವಾಹನದಲ್ಲಿ ಯುವತಿಯನ್ನು ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ‌ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here