ಮಂಗಳೂರು: ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ವೀಡಿಯೊ ಲಿಂಕ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿ.30ರಂದು ಚಾಲನೆ ಮಾಡಿದರು.
ತಾತ್ಕಾಲಿಕ ವೇಳಾಪಟ್ಟಿಯಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 8:30ಕ್ಕೆ ನಿರ್ಗಮಿಸಿ, ಮಧ್ಯಾಹ್ನ 1:05 ಕ್ಕೆ ಮಡಗಾಂವ್ ಗೆ ತಲುಪುತ್ತದೆ.
ಮಡಗಾಂವ್ ನಿಂದ ಸಂಜೆ 6:10ಕ್ಕೆ ಹೊರಟು, ರಾತ್ರಿ 10:45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್ ಸ್ಟೇಷನ್ ನಲ್ಲಿ ನವೀಕರಿಸಿದ ಪಿಟ್ ಲೈನ್ ನಲ್ಲಿ ರಾತ್ರಿ ತಂಗಲಿದೆ.
ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ಅಮೃತ್ ಭಾರತ್ ರೈಲುಗಳು ಮತ್ತು ಮಂಗಳೂರು ಸೇರಿ ಆರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು.
ಮುಂಬಯಿ ರೈಲಿಗೂ ಲಿಂಕ್
ಮುಂಬಯಿ – ಮಂಗಳೂರು ನಡುವೆ ವಂದೇ ಭಾರತ್ ಓಡಿಸುವಂತೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಮಂಗಳೂರು – ಮಡಗಾಂವ್ ನಡುವಿನ ಈ ರೈಲು ಮುಂಬಯಿ ರೈಲಿಗೆ ಸಂಪರ್ಕ ಕಲ್ಪಿಸಲಿದೆ. ಮಧ್ಯಾಹ್ನ ಈ ರೈಲು ಮಡಗಾಂವ್ ತಲುಪುತ್ತಿದ್ದಂತೆ ಅಲ್ಲಿ ಮುಂಬಯಿ ರೈಲು ಸಂಪರ್ಕಕ್ಕೆ ದೊರೆಯಲಿದೆ. ಇದರಿಂದ 10 ಗಂಟೆ ಅವಧಿಯಲ್ಲಿ ಮುಂಬಯಿಗೆ ತಲುಪಲು ಸಾಧ್ಯ.