ಮಂಗಳೂರು(ಮೈಸೂರು): ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ತೇತ್ರಾಯುಗವನ್ನೆ ಅಯೋಧ್ಯೆಯಲ್ಲಿ ಮರುಸೃಷ್ಟಿಸಲು ಭರ್ಜರಿ ತಯಾರಿ ನಡೆಯುತ್ತಿದೆ. ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಇದೆಲ್ಲದರ ನಡುವೆ ಬಾಲರಾಮ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರ ಹಿರಿಯ ಸಹೋದರ ಶಿಲ್ಪಿ ಸೂರ್ಯಪ್ರಕಾಶ್, ಹೆಚ್ ಡಿ ಕೋಟೆಯ ಕಲ್ಲಿನಿಂದ ರಾಮನ ಮೂರ್ತಿಯನ್ನು ಕೆತ್ತಲಾಗಿದೆ ಎಂದು ಹೇಳಿದ್ದಾರೆ.
ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ ಕಲ್ಲು ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದಿಂದ ತರಲಾಗಿದ್ದು, ಈ ಕಲ್ಲನ್ನು ಕೃಷ್ಣ ಶಿಲೆ ಎಂದು ಹೇಳಲಾಗುತ್ತದೆ. ನೈಸರ್ಗಿಕವಾಗಿ ಆ್ಯಸಿಡ್, ವಾಟರ್, ಫೈರ್, ರಸ್ಟ್ ಪ್ರೊಫ್ ನಿಂದ ಕೂಡಿರುವ ಕೃಷ್ಣ ಶಿಲೆಯಲ್ಲಿ ಬಾಲರಾಮ ಮೂರ್ತಿ ಕೆತ್ತನೆ ಮಾಡಲಾಗಿದೆ. ಕಬ್ಬಿಣವನ್ನು 850 ಡಿಗ್ರಿ ಶಾಖದಲ್ಲಿ ಕಾಯಿಸಿದರೆ ಕರಗಿ ಹೋಗುತ್ತೆ. ಆದರೆ ಕೃಷ್ಣ ಶಿಲೆ ಕರಗಲ್ಲ, ಸಿಡಿಯಲ್ಲ, ಆ್ಯಸಿಡ್ ಹಾಕಿದ್ರು ಏನೂ ಆಗಲ್ಲ. ಮಳೆ, ಗಾಳಿ, ಬಿಸಿಲಿಗೂ ಕೃಷ್ಣ ಶಿಲೆ ಏನು ಆಗಲ್ಲ. ಮೈಸೂರು ಅರಮನೆಯಲ್ಲಿರುವ ಮೂರ್ತಿಗಳು ಕೃಷ್ಣ ಶಿಲೆಯಲ್ಲೇ ಮಾಡಿರುವುದು. ಮೈಸೂರಿನ ಹೆಚ್.ಡಿ ಕೋಟೆ ಹಾಗೂ ಹಾಸನದಲ್ಲಿ ಮಾತ್ರ ಕೃಷ್ಣ ಶಿಲೆ ಕಲ್ಲುಗಳು ಸಿಗುತ್ತದೆ. ಹಾಸನದಲ್ಲಿ ಸಿಗುವ ಕಲ್ಲು, ಹೆಚ್.ಡಿ.ಕೋಟೆಯಲ್ಲಿ ಸಿಗುವ ಕಲ್ಲಿನಷ್ಟು ಚೆನ್ನಾಗಿಲ್ಲ. ಶಂಕರಾಚಾರ್ಯರ ಮೂರ್ತಿಯನ್ನು ಮಾಡಿದ್ದು ಹೆಚ್.ಡಿ.ಕೋಟೆಯ ಕೃಷ್ಣ ಶಿಲೆಯಲ್ಲೇ ಎಂದು ಶಿಲ್ಪಿ ಸೂರ್ಯಪ್ರಕಾಶ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಸರ್ಕಾರ ಕೃಷ್ಣ ಶಿಲೆ ಸಿಗುತ್ತಿರುವ ಜಾಗವನ್ನ ಸಂರಕ್ಷಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಗಟ್ಟಿ ಕಲ್ಲಿನಿಂದ ಕೆತ್ತನೆ ಮಾಡುವುದು ಬಹಳ ಕಷ್ಟದ ಕೆಲಸ. ಇದನ್ನ ಎಲ್ಲರೂ ಬಳಪದ ಕಲ್ಲು ಎನ್ನುತ್ತಾರೆ. ಆದರೆ ಇದು ಬಳಪದ ಕಲ್ಲಲ್ಲ. ಈ ಕಲ್ಲಿನ ವಿಶೇಷ ಅಂದ್ರೆ ಎಲ್ಲಾ ಕಾಲದಲ್ಲೂ ಒಂದೇ ಟೆಂಪರೇಚರ್ ಇರುತ್ತೆ. ಈ ಕಾರಣದಿಂದ ವಿದೇಶಗಳಲ್ಲಿ ಇದನ್ನ ಸೀಲಿಂಗ್ಗೆ ಬಳಸುತ್ತಿದ್ದಾರೆ. ಇದರಿಂದ ಚಳಿ, ಮಳೆ, ಬೇಸಿಗೆ ಎಲ್ಲಾ ಸಂದರ್ಭದಲ್ಲೂ ಒಂದೇ ವಾತಾವರಣ ಇರುತ್ತದೆ ಎಂದು ಅವರು ಹೇಳಿದ್ದಾರೆ.