ಮಂಗಳೂರು: ಜ.22ರಂದು ರಾಮ ಮಂದಿರ ಲೋಕಾರ್ಪಣೆ ಹೆಮ್ಮೆಯ ವಿಚಾರ. ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಾದ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯ ಮಾಡೋದು ಖೇದಕರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್ ಪದ್ಮರಾಜ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಯೋಧ್ಯೆ ವಿವಾದ ಹಿಂದೆ ಇತ್ತು, ವ್ಯಾಜ್ಯ ಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಅದನ್ನು ಪಾಲಿಸುವುದು ಎಲ್ಲರ ಕರ್ತವ್ಯ, ಇದರಲ್ಲಿರಾಜಕೀಯ ಮಾಡುವ ಔಚಿತ್ಯವೇನು? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಅವಿದ್ಯಾವಂತರು ಮಾತನಾಡುವ ರೀತಿ ವ್ಯಾಖ್ಯಾನ ಮಾಡುತ್ತಾರೆ. ರಾಮ ಭಕ್ತರ ಮೇಲೆ ಕೈ ಸರ್ಕಾರಕ್ಕೆ ಕೋಪವೇಕೆ ಎಂದು ಪ್ರಶ್ನಿಸುವ ಮೂಲಕ ವಿಷಯವನ್ನು ಎಲ್ಲಿಂದ ಎಲ್ಲಿಗೋ ಕನೆಕ್ಟ್ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿ ಇಬ್ಬರ ಮೇಲೆ ಎಲ್ಪಿಸಿ- ಲಾಂಗ್ ಪೆಂಡಿಂಗ್ ಕೇಸ್ ಅಂತ ಪೆಂಡಿಂಗ್ ಇಟ್ಟಿದ್ರು. ಅವರ ಮೇಲೆ ಕ್ರಿಮಿನಲ್ ಪ್ರಕರಣ ಇತ್ತು. ಕೋರ್ಟ್ ಆಜ್ಞೆ ಪ್ರಕಾರ ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಏನಿದೆ? ಸಾಮಾನ್ಯ ಜ್ಞಾನ ಇರಬೇಕು. ಕೈ ಸರ್ಕಾರ ಬಂದ ಮೇಲೆ ಹಿಂದೂಗಳಿಗೂ ಅನುಕೂಲ ಆಗಿದೆ. ಶಬರಿಮಲೆಗೆ ವಿಶೇಷ ಬಸ್, ಅರ್ಚಕರಿಗೆ ಗೌರವ ಧನ ಹೆಚ್ಚಳ, ಸಾಮೂಹಿಕ ವಿಮೆ, ದೀಪಾವಳಿ ವೇಳೆ ಗೋಪೂಜೆಗೆ ಆಜ್ಞೆ, ಕಾಶಿ ಹೋಗುವವರ ಸಹಾಯಧನ ಹೆಚ್ಚಳ. ಇದೆಲ್ಲ ಕಣ್ಣಿಗೆ ಕಾಣಲ್ವೆ ಎಂದು ಪ್ರಶ್ನಿಸಿದ್ದಾರೆ.
ಯಾಕೆ ನಿಮ್ಮ ಸರ್ಕಾರ ಇತ್ತಲ್ಲ, ಪ್ರಕರಣ ಮುಗಿಸಬಹುದಿತ್ತಲ್ಲ, ಜನ ಮೆಚ್ಚುವ ಕೆಲಸ ಮಾಡಿ, ಮಂಗಳೂರಲ್ಲಿ ಎಲ್ಲಾ ಅಗೆದು ಹಾಕಿದ್ದಾರೆ. ಇದರ ಬಗ್ಗೆ ಗಮನ ಹರಿಸಿದ್ದೀರಾ? ಅದು ಬಿಟ್ಟು ಜನರ ನಡುವೆ ಕಂದಕ ಸೃಷ್ಟಿ ಮಾಡುವ ಕೆಲಸವನ್ನು ರಾಮ ಮೆಚ್ಚಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಟಾಂಗ್ ನೀಡಿರುವ ಪದ್ಮರಾಜ್, ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾ ಕಾರ್ಯಕ್ರಮ ಕೇಂದ್ರದ ವತಿಯಿಂದ ನಡೆಯಲಿದ್ದು, ಕೇಂದ್ರವೇ ಸಾರ್ವತ್ರಿಕ ರಜೆ ಘೋಷಣೆ ಮಾಡಲಿ. ರಜೆಗಾಗಿ ಒತ್ತಾಯ ನಡೆಯುತ್ತಿದ್ದು ಅವರು ವಿಷಯ ಅರಿತು ಸರಿಯಾಗಿ ಮಾತನಾಡಬೇಕು ಎಂದು ಹೇಳಿದರು.
ಲವ್ ಜಿಹಾದ್ ಧರ್ಮಾಧಾರಿತ ವಿಚಾರ ಇಟ್ಕೊಂಡು ಗೆಲ್ಬೇಕು ಅನ್ನೋದು ಹೆಚ್ಚಿನ ದಿನ ನಡೆಯಲ್ಲ. ಜವಾಬ್ದಾರಿಯಿಂದ ವರ್ತಿಸಿ. ಸೌಹಾರ್ದ ವಾತಾವರಣ ಬೆಳೆಸಿ, ಬದಲಾಗಿ ಹಾಳು ಮಾಡಬೇಡಿ. ಗ್ಯಾರಂಟಿ ಪೂರೈಸಿದ ಸರಕಾರ ಕೈ ಸರಕಾರ. ಬಡವರಿಗೆ ಆಶಾಕಿರಣವಾಗಿ ಇತಿಹಾಸ ನಿರ್ಮಿಸಿದೆ. ಒಳ್ಳೆಯ ಕೆಲಸ ಮಾಡಿದಾಗ ಅಭಿನಂದನೆ ಮಾಡಿ, ಪ್ರತಿ ಸಲ ಟೀಕೆ ಮಾಡುವುದು ಸರಿಯಲ್ಲ. ಮಾಜಿ ಸಚಿವ ಆಂಜನೇಯ ಹೇಳಿಕೆ ಗಮನಿಸಿಲ್ಲ. ಪಕ್ಷದ ಮುಖಂಡರ ಹೇಳಿಕೆಗೆ ಎಲ್ಲರೂ ಬದ್ಧವಾಗಿರಬೇಕು. ಎಲ್ಲರೂ ಭಕ್ತಿಪೂರ್ವಕ ಆಚರಣೆ ಮಾಡಲು ಪಕ್ಷದಿಂದ ನಮಗೂ ಸೂಚನೆ ಬಂದಿದೆ. ಮುಜರಾಯಿ ದೇವಾಲಯಗಳಲ್ಲೂ ಪೂಜೆ ನಡೆಯಲಿದೆ. ಹಾಗೇ ಮಾಡ್ತೇವೆ. ಮುಖ್ಯಮಂತ್ರಿ ಅವರು ರಾಮಮಂದಿರವನ್ನು ಸ್ವಾಗತ ಮಾಡಿ ಜನರಿಗೆ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಪತ್ರಕಾಗೋಷ್ಠಿಯಲ್ಲಿ ಶಾಂತಲಾ, ಸಂತೋಷ್, ಚಂದ್ರಕಲಾ,ಉದಯ ಆಚಾರಿ, ರಾಕೇಶ್ ದೇವಾಡಿಗ, ಕೇಶವ ಮರೋಳಿ, ಚೇತನ್ ಕುಮಾರ್, ಯೋಗೀಶ್, ಪ್ರೇಮ್ ಉಪಸ್ಥಿತರಿದ್ದರು.