ನೌಕಾದಳದ ರೋಚಕ ಕಾರ್ಯಾಚರಣೆ-ಸೊಮಾಲಿಯಾ ಬಳಿ ಅಪಹರಿಸಲಾಗಿದ್ದ ಹಡಗಿನಲ್ಲಿಂದ ಭಾರತೀಯರ ರಕ್ಷಣೆ

ಮಂಗಳೂರು(ನವದೆಹಲಿ): ಸೊಮಾಲಿಯಾ ಕರಾವಳಿಯ ಬಳಿ ಅಪಹರಿಸಲಾಗಿದ್ದ ಹಡಗಿನಿಂದ ಎಲ್ಲಾ 15 ಭಾರತೀಯರನ್ನು ಭಾರತೀಯ ನೌಕಾಪಡೆ ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಈ ಕುರಿತು ಭಾರತೀಯ ನೌಕಾಪಡೆ X ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಲ್ಲದೇ ಐಎನ್‌ಎಸ್ ಚೆನ್ನೈ ಹಡಗಿನ ರೋಚಕ ಕಾರ್ಯಾಚರಣೆಯ ಡ್ರೋನ್ ವಿಡಿಯೊಗಳನ್ನೂ ಬಿಡುಗಡೆ ಮಾಡಿದೆ ಜ.5ರಂದು ಲೈಬೀರಿಯಾ ಮೂಲದ ಹಡಗನ್ನು (ಎಂವಿ ಲೈಲಾ ನಾರ್ಫೋಕ್) ದುಷ್ಕರ್ಮಿಗಳು ಉತ್ತರ ಅರೇಬಿಯಾ ಸಮುದ್ರದ ಸೊಮಾಲಿಯಾ ಕರಾವಳಿ ಬಳಿ ಜ.4ರ ಸಂಜೆ ಅಪಹರಿಸಿದ್ದರು. ಈ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು ಎಂಬುದು ತಿಳಿದು ಬಂದಿತ್ತು. ಕೂಡಲೇ ಎಚ್ಚೆತ್ತ ಭಾರತೀಯ ನೌಕಾಪಡೆಯ ಯುದ್ಧನೌಕೆ ‘ಐಎನ್‌ಎಸ್’ ಚೆನ್ನೈ , ಅಪಹರಣಕ್ಕೊಳಗಾದ ಹಡಗಿನ ಕಡೆಗೆ ತೆರಳಿತ್ತು. ನೌಕಾದಳದ ಸೈನಿಕರು ಕಾರ್ಯಾಚರಣೆ ನಡೆಸಿ 15 ಭಾರತೀಯರು ಸೇರಿದಂತೆ 21 ಸಿಬ್ಬಂದಿಯನ್ನು ರಕ್ಷಿಸಿದೆ.

ಶಂಕಿತ ಕಡಲ್ಗಳ್ಳರು ಲೈಬೀರಿಯಾ ಹಡಗನ್ನು ಅಪಹರಿಸಲು ಯತ್ನಿಸಿದ್ದರು. ಭಾರತೀಯ ನೌಕಾದಳದ ಸೈನಿಕರು ಹಡಗಿನ ಸನಿಹ ಬಂದಿದ್ದನ್ನು ಅರಿತ ಕಡಲ್ಗಳ್ಳರು ಅಲ್ಲಿಂದ ಕಾಲ್ಕಿತ್ತರು. ರಕ್ಷಿಸಲ್ಪಟ್ಟ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆ ತಿಳಿಸಿದೆ. ಹಡಗು ಬ್ರೆಜಿಲ್‌ನ ಡು ಅಕೊ ಬಂದರಿನಿಂದ ಸಂಚಾರ ಆರಂಭಿಸಿದ್ದು, ಬಹರೇನ್‌ನ ಖಲೀಫಾ ಬಿನ್ ಸಲ್ಮಾನ್‌ಗೆ ತೆರಳುತ್ತಿತ್ತು. ಅಪಹರಣಕ್ಕೆ ಒಳಗಾದಾಗ ಸೊಮಾಲಿಯಾ ಪೂರ್ವದಲ್ಲಿ 300 ನಾಟಿಕಲ್‌ ಮೈಲು ದೂರದಲ್ಲಿತ್ತು. ಹಡಗಿನ ಸಮೀಪದಲ್ಲಿಯೇ ಐಎನ್‌ಎಸ್‌ ಚೆನ್ನೈ ಇದ್ದುದರಿಂದ, ಕಾರ್ಯಾಚರಣೆಗೆ ತೊಡಗಿಸಲಾಯಿತು. ಇದು, ಅಪಹೃತ ಹಡಗನ್ನು ಮಧ್ಯಾಹ್ನ ಅಡ್ಡಗಟ್ಟಿತ್ತು. ಗಸ್ತು ವಿಮಾನ, ಶಸ್ತ್ರಸಜ್ಜಿತ ಎಂಕ್ಯೂ9ಬಿ ಡ್ರೋನ್‌, ಹೆಲಿಕಾಪ್ಟರ್‌ ಬಳಸಿಯೂ ನಿಗಾ ವಹಿಸಲಾಗಿತ್ತು.

ಇದಕ್ಕೂ ಮೊದಲೇ ನೌಕಾಪಡೆಯ ಯುದ್ಧ ವಿಮಾನದ ಮೂಲಕ ಹಡಗಿನೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಭಾರತೀಯ ಸಿಬ್ಬಂದಿ ಸೇರಿ ಹಡಗಿನಲ್ಲಿದ್ದವರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲಾಗಿತ್ತು. ರಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕ ಹಡಗಿನಲ್ಲಿ ವಿದ್ಯುತ್‌ ಸಂಪರ್ಕ ಮರುಸ್ಥಾಪಿಸಲಾಗಿದೆ. ಮುಂದಿನ ಬಂದರಿನೆಡೆಗಿನ ಸಂಚಾರವನ್ನು ಹಡಗು ಮುಂದುವರಿಸಿತು. ಹಡಗು ಅಪಹರಣವಾಗಿದ್ದನ್ನು ಗುರುವಾರ ಇಂಗ್ಲೆಂಡ್‌ನ ಯುಕೆಎಂಟಿಒ ಪೋರ್ಟಲ್‌ನಲ್ಲಿ ಪ್ರಕಟಿಸಲಾಗಿತ್ತು. 5–6 ಜನರಿದ್ದ ಶಸ್ತ್ರಸಜ್ಜಿತರ ಗುಂಪು ಜ. 4ರಂದು ಹಡಗನ್ನು ಏರಿತ್ತು ಎಂದು ತಿಳಿಸಲಾಗಿತ್ತು. ವಾಣಿಜ್ಯ ಉದ್ದೇಶದ ಹಡಗುಗಳ ಅಪಹರಣ ಅಥವಾ ಅಪಹರಣದ ಯತ್ನ ಕೃತ್ಯಗಳು ಏಡನ್‌ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ವಲಯದಲ್ಲಿ ಆರು ವರ್ಷಗಳ ತರುವಾಯ ಕಳೆದ ಡಿಸೆಂಬರ್ ತಿಂಗಳಲ್ಲಿ ಹಠಾತ್‌ ಏರಿಕೆಯಾಗಿವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here